www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಡಬ್ಬಲ್ ಇಂಜಿನ್ ಸರ್ಕಾರ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್ ಕುಮಾರ್ ಕಟೀಲ್, ಮೊದಲು ತಮ್ಮ ಜಿಲ್ಲೆಯ ಸಮಸ್ಯೆ ಬಗೆಹರಿಸಲಿ, ನಂತರ ಬೇರೆ ವಿಚಾರಗಳ ಕುರಿತು ಮಾತನಾಡಲಿ ಎಂದು ಎಸ್.ಡಿ.ಪಿ.ಐ. ಸಲಹೆ ನೀಡಿದೆ.
ಬಂಟ್ವಾಳದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಡಿ.ಪಿ.ಐ. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಹೆದ್ದಾರಿ ನಿರ್ವಹಣೆಯಾಗದೆ ಜನರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ಟೋಲ್ ಸಮೀಪದ ಸರ್ವೀಸ್ ರಸ್ತೆ ಸಮಸ್ಯೆ ಹಾಗೆಯೇ ಇದೆ, ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಬಂದಿಲ್ಲ, ಮರಳು ಮಾಫಿಯಾ ಹಾಗೆಯೇ ಇದೆ ಎಂದರು. ಬೆಂಜನಪದವು ಕ್ರೀಡಾಂಗಣ ಆಗಿಲ್ಲ ಎಂದ ಅವರು, ನಳಿನ್ ಅವರು ಇವುಗಳ ಕುರಿತು ಗಮನಹರಿಸಲಿ, ಶಾಸಕರ ಬಂಟ್ವಾಳ ನಗರ ಸೌಂದರ್ಯವೃದ್ಧಿ ಎಂಬುದು ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ಟೀಕಿಸಿದ ಎಸ್.ಡಿ.ಪಿ.ಐ. ಸಮಸ್ಯೆಗೆ ಪರಿಹಾರ ದೊರಕದೇ ಇದ್ದರೆ, ಹೋರಾಟ ಹಾದಿ ಹಿಡಿಯುತ್ತೇವೆ ಎಂದರು. ಯಾವುದೇ ವ್ಯಕ್ತಿಯ ಧಾರ್ಮಿಕ ವಿಚಾರಕ್ಕೆ ಧಕ್ಕೆಯಾದಾಗ ಮಾನವ ಹಕ್ಕಿನ ಪರ ನಿಲ್ಲುವುದು ನೈತಿಕ ಬೆಂಬಲ ನೀಡುವುದು ಪಕ್ಷದ ಜವಬ್ದಾರಿ ಯಾಗಿದೆ ಎಂದು ಹಿಜಾಬ್ ವಿಚಾರವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ ಪ್ರಸಾದ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಮಹಮ್ಮದ್ ತುಂಬೆ, ಜಿಲ್ಲಾಧ್ಯಕ್ಷ ಅಬುಬಕ್ಕರ್ ಕುಳಾಯಿ, ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಇದ್ದರು.