www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಮುಖ್ಯ ಕಾರ್ಯಗಳಿಗೆಂದು ಖರೀದಿಸಲಾದ ಜೆಸಿಬಿ ಯಂತ್ರದ ರಿಪೇರಿಗೆ ಬಿಲ್ ಪಾವತಿಯಾಗದ ಗೊಂದಲದ ಕಾರಣ ಅದು ಕಂಪನಿಯ ವಶದಲ್ಲೇ ಇರುವ ವಿಚಾರ ಗುರುವಾರ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
ಸದಸ್ಯರಾದ ಗೋವಿಂದ ಪ್ರಭು, ವಾಸು ಪೂಜಾರಿ, ಮಹಮ್ಮದ್ ನಂದರಬೆಟ್ಟು, ಪಿ.ರಾಮಕೃಷ್ಣ ಆಳ್ವ, ಜನಾರ್ದನ ಚಂಡ್ತಿಮಾರ್, ಸಿದ್ದೀಕ್ ಗುಡ್ಡೆಯಂಗಡಿ ವಿಷಯ ಪ್ರಸ್ತಾಪಿಸಿದರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು, ಜೆಸಿಬಿಯ ಈಗಿನ ದುರಸ್ತಿಯ ಮೊತ್ತ ಪಾವತಿಯಾಗಿದೆ. ಆದರೆ ಹಿಂದೆ ಕಾರ್ಯನಿರ್ವಹಿಸಿದ್ದ ಅಧಿಕಾರಿ ನನ್ನ ಗಮನಕ್ಕೆ ಬಾರದೆ ದುರಸ್ತಿಗೆ ನೀಡಿದ್ದು, ಅದರ ಬಿಲ್ಲು ಪಾವತಿಯಾಗಿಲ್ಲ ಎಂದು ತಿಳಿಸಿದರು. ತ್ಯಾಜ್ಯ ವಿಲೇವಾರಿಯ ಕಾರ್ಯಕ್ಕೆ ಬಳಕೆಯಾಗುವ ಜೇಸಿಬಿ ಯಂತ್ರದ ದುರಸ್ತಿಯ ಶುಲ್ಕ ಪಾವತಿಸದ ಕಾರಣಕ್ಕೆ ಯಂತ್ರವನ್ನು ಹಿಂದಿರುಗಿಸದೇ ಇರುವ ಹಿನ್ನೆಲೆಯಲ್ಲಿ ಇದಕ್ಕೆ ಕಾರಣವಾಗಿರುವ ಹಿಂದೆ ಕರ್ತವ್ಯ ಲೋಪ ಎಸಗಿದ ಹಿಂದಿನ ಪರಿಸರ ಅಧಿಕಾರಿ ವಿರುದ್ಧ ಮೇಲಾಧಿಕಾರಿಗೆ ದೂರು ನೀಡುವ ಜತೆಗೆ ಜೆಸಿಬಿಯನ್ನು ಶೀಘ್ರ ಬಿಡಿಸಿಕೊಂಡು ಬರುವ ಕುರಿತು ಪುರಸಭಾಧ್ಯಕ್ಷ ಶರೀಫ್ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
ಪುರಸಭೆಯಲ್ಲಿ ಗಣರಾಜ್ಯೋತ್ಸವ ಆಚರಿಸಿಲ್ಲವೇಕೆ, ಇದು ಸಂವಿಧಾನ ಮತ್ತು ಡಾ. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿ, ಆಡಳಿತ ಪಕ್ಷದ ಸದಸ್ಯ ಜನಾರ್ದನ ಚಂಡ್ತಿಮಾರ್ ಧರಣಿ ಕುಳಿತ ಪ್ರಸಂಗ ನಡೆಯಿತು.ಸ್ಪಷ್ಟನೆ ನೀಡಿದ ಬಳಿಕವೇ ಸಭೆ ಮುಂದುವರಿಸಿ ಎಂದು ಪಟ್ಟು ಹಿಡಿದರು.
ಬಳಿಕ ಹಿರಿಯ ಸದಸ್ಯ ಗೋವಿಂದ ಪ್ರಭು ಜನಾರ್ದನ ಚಂಡ್ತಿಮಾರ್ ಅವರ ಮನವೊಲಿಸಿ ವಾಪಸ್ ಕರೆತಂದರು. ಈ ಸಂದರ್ಭ ನಡೆದ ಚರ್ಚೆ ವೇಳೆ ಅಧ್ಯಕ್ಷ ಸಹಿತ ಪುರಸಭೆಗೆ ತಾಲೂಕು ಆಡಳಿತ ನಡೆಸುವ ಗಣರಾಜ್ಯೋತ್ಸವದ ಆಹ್ವಾನ ಪತ್ರಿಕೆಯೇ ಬಂದಿರಲಿಲ್ಲ ಎಂದು ಸ್ವತಃ ಅಧ್ಯಕ್ಷರು ತಿಳಿಸಿದರು.
ನೇರಂಬೋಳುನಲ್ಲಿ 17 ಎಕರೆ ಜಮೀನಿನ ಮರಗಳನ್ನು ಕಡಿದು ಸಾಗಿಸುವ ಜತೆಗೆ ಅಲ್ಲಿ ಗಿಡಗಳನ್ನು ನೆಡಲಾಗುತ್ತಿದ್ದು, ಪುರಸಭೆ ಯಾಕೆ ಕ್ರಮಕೈಗೊಂಡಿಲ್ಲ ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು.ಸದಸ್ಯ ವಾಸು ಪೂಜಾರಿ ದನಿಗೂಡಿಸಿದರು. ಮೆಲ್ಕಾರಿನಲ್ಲಿ ಹೆದ್ದಾರಿ ಇಲಾಖೆಯವರು ತರಾತುರಿಯಲ್ಲಿ ಅಗೆಯಲು ಆರಂಭಿಸಿದ್ದು, ಇದರಿಂದ ಮೆಲ್ಕಾರ್, ರೆಂಗೇಲು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ಈ ಕುರಿತು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಸದಸ್ಯ ಅಬೂಬಕ್ಕರ್ ಸಿದ್ದೀಕ್ ಹಾಗೂ ಉಪಾಧ್ಯಕ್ಷ ಜೆಸಿಂತಾ ಡಿಸೋಜಾ ಆಗ್ರಹಿಸಿದರು. ಸದಸ್ಯರಾದ ರಾಮಕೃಷ್ಣ ಆಳ್ವ, ಮೊಹಮ್ಮದ್ ನಂದರಬೆಟ್ಟು, ಹರಿಪ್ರಸಾದ್, ಗಂಗಾಧರ ಪೂಜಾರಿ, ವಿದ್ಯಾವತಿ, ವಾಸು ಪೂಜಾರಿ, ಹಸೈನಾರ್ ಸಹಿತ ಸದಸ್ಯರು ವಿವಿಧ ವಿಷಯಗಳ ಕುರಿತು ಮಾತನಾಡಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಉಪಸ್ಥಿತರಿದ್ದರು.