www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಬೋಳುಗುಡ್ಡೆಯಲ್ಲಿ ಜೀವಜಲವನ್ನು ಏಕಾಂಗಿಯಾಗಿ ತರಿಸಿದ ಭಗೀರಥ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಗೌರವ ಪ್ರಾಪ್ತವಾಗಿದೆ.
ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 77ರ ಹರೆಯದ ಮಹಾಲಿಂಗ ನಾಯ್ಕ ಕರಾವಳಿಯ ಪ್ರಮುಖ ಕೃಷಿ ಸಾಧಕ. ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್ ಸೌಲಭ್ಯಗಳೇ ಕಷ್ಟ ಎಂಬ ಕಾಲದಲ್ಲಿ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆ ಕಲ್ಪಿಸಿರುವ ನಾಯ್ಕ ಅವರು ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದವರು.ಇಳಿಜಾರು ಬೋಳು ಗುಡ್ಡೆಯಲ್ಲಿ ಕೃಷಿ ಮಾಡುವ ಸಾಹಸಕ್ಕೆ ಹೊರಟ ಮಹಾಲಿಂಗ ನಾಯ್ಕ ಅವರು ಸುರಂಗ ತೋಡಿದ ಯಶೋಗಾಥೆಗೆ ಈ ಪ್ರಶಸ್ತಿ.