www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ತುರ್ತು ನಿಗಾ ಘಟಕದಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಇಂಡೋ ಯುಎಸ್ ಚೇಂಬರ್ ಆಫ್ ಕೋಮರ್ಸ್, ರೋಟರಿ ಕ್ಲಬ್ ಬಂಟ್ವಾಳ, ಮೈಸೂರು ರೋಟರಿ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಕೊಡುಗೆಯಾಗಿ ನೀಡಿದ ೫.೮೦ ಲಕ್ಷ ರೂಪಾಯಿ ಮೊತ್ತದ ಆರೋಗ್ಯ ಚಿಕಿತ್ಸಾ ಪರಿಕರಗಳಾದ ೨ ಮಲ್ಟಿಪ್ಯಾರಾ ಮಾನಿಟರ್, ಕಾರ್ಡಿಯಕ್ ಡೆಫಿಬ್ರಿಲೆಟರ್, ಇನ್‌ಪ್ಯೂಷನ್ ಪಂಪ್, ಐಸಿಯು ಬೆಡ್‌ಗಳನ್ನು ರೋಟರಿ ಕ್ಲಬ್ ಬಂಟ್ವಾಳಧ ಮೂಲಕ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಶುಕ್ರವಾರ ಸಂಜೆ ಹಸ್ತಾಂತರಿಸಲಾಯಿತು.
ಬಂಟ್ವಾಳ ರೋಟರಿ ಕ್ಲಬ್‌ಗೆ ಭೇಟಿ ನೀಡಿದ್ದ, ಮೂಲತಃ ಮೂಡುಬಿದಿರೆ ಸಮೀಪದ ಬೆಳುವಾಯಿಯವರಾಗಿರುವ ಯು.ಎಸ್.ಎ.ಯ ನ್ಯೂ ಟಂಪಾ ನೂನ್ ರೋಟರಿ ಕ್ಲಬ್ ಪೂರ್ವ ಜಿಲ್ಲಾ ಗವರ್ನರ್ ಬೆಳ್ವಾಯಿ ವಿನಾಯಕ್ ಕುಡ್ವ ಅವರು ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಆಸ್ಪತ್ರೆಗೆ ಅಗತ್ಯವುಳ್ಳ ಆರೋಗ್ಯ ಚಿಕಿತ್ಸಾ ಸಲಕರಣೆಗಳನ್ನು ರೋಟರಿ ಸಂಸ್ಥೆ ನೀಡುತ್ತಿದ್ದು ಅದರಂತೆ ಬಂಟ್ವಾಳ ರೋಟರಿ ಕ್ಲಬ್ ಮೂಲಕ ಇಲ್ಲಿನ ಸರಕಾರಿ ಆಸ್ಪತ್ರೆಗೂ ನೀಡಲಾಗಿದೆ. ಆರೋಗ್ಯ ಪರಿಕರಗಳನ್ನು ಅತ್ಯುತ್ತಮವಾಗಿ ಆಸ್ಪತ್ರೆಯಲ್ಲಿ ಅಳವಡಿಸಿರುವುದು ತುಂಬಾ ಸಂತೋಷ ನೀಡಿದೆ. ಈ ಭಾಗದ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿದೆ ಎನ್ನುವ ನಂಬಿಕೆ ಇದೆ, ರೋಟರಿ ಸಂಸ್ಥೆ ನೀಡಿದ ದೇಣಿಗೆ ಸದುಪಯೋಗವಾಗಿದೆ ಎಂದು ತಿಳಿಸಿದರು.
ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ ರೋಟರಿ ಕ್ಲಬ್ ಬಂಟ್ವಾಳದ ಮೂಲಕ ರೋಗಿಗಳ ಚಿಕಿತ್ಸೆಗೆ ಬೇಕಾಗುವ ಅಗತ್ಯ ಪರಿಕರಗಳನ್ನು ನೀಡಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಮಹಮ್ಮದ್ ವಳವೂರು, ಜಿಲ್ಲಾ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್, ಸದಸ್ಯರಾದ ರಿತೇಶ್ ಬಾಳಿಗ, ಡಾ. ರಮೇಶಾನಂದ ಸೋಮಯಾಜಿ, ನಾರಾಯಣ ಹೆಗ್ಡೆ, ಮಂಜುನಾಥ ಆಚಾರ್ಯ, ಸಂಜೀವ ಪೂಜಾರಿ, ವಸಂತ ಪ್ರಭು, ಪುತ್ತೂರು ಕ್ಲಬ್‌ನ ನಿಯೋಜಿತ ಅಧ್ಯಕ್ಷ ಪ್ರಶಾಂತ್ ಶೆಣೈ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಉಪಸ್ಥಿತರಿದ್ದರು.