ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಸರಿದಂತರ ಪ್ರಕಾಶನದ ವತಿಯಿಂದ ಬಿ.ಸಿ.ರೋಡಿನ ಜೋಡುಮಾರ್ಗದ ಮೊಡಂಕಾಪುವಿನಲ್ಲಿ ನಡೆದ ಸಮಾರಂಭದಲ್ಲಿ 2021ನೇ ಸಾಲಿನ ‘ಸರಿದಂತರ ಪ್ರಶಸ್ತಿಯನ್ನು ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ ಅವರಿಗೆ ನೀಡಿ ಗೌರವಿಸಲಾಯಿತು.
ಮಹಿಳೆ ಅಬಲೆಯಲ್ಲ, ಸಬಲೆಯಾಗಬೇಕು. ಮಾನವ ಜನ್ಮದಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ, ಸಮಾಜದ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವುದು ನಮ್ಮ ಕರ್ತವ್ಯ ಎಂದು ಈ ಸಂದರ್ಭ ಲೋಕೇಶ್ವರಿ ವಿನಯಚಂದ್ರ ಹೇಳಿದರು.ಸರಿದಂತರ ಪ್ರಕಾಶನದ ಸಂಚಾಲಕ ರಾಜಮಣಿ ರಾಮಕುಂಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಕಾಶನದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಈ ಸಂದರ್ಭ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ ಎಂ.ಕೆ ಅವರು ಧರ್ಮ-ಕರ್ಮ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭಗವದ್ಗೀತೆಯಲ್ಲಿ ಧರ್ಮ-ಕರ್ಮದ ವಿಷಯ ತಿಳಿಸಿ, ಅದನ್ನು ಇಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂದು ತಿಳಿಸಿದ ಅವರು, ಧರ್ಮದ ಕೆಲವು ಜಿಜ್ಞಾಸೆಗಳಿಗೆ ಉತ್ತರವಿಲ್ಲ, ಅದಕ್ಕೆ ಪರಿಹಾರ ನಾವೇ ಕಂಡುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ)ದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಮಾತನಾಡಿ, ಸಂಬಂಧವೇ ದೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅದನ್ನು ಸರಿಪಡಿಸಲೇಬೇಕಾದ ಅನಿವಾರ್ಯತೆ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಎ.ವಿ.ನಾರಾಯಣ ಮಾತನಾಡಿ, ಸಂಬಂಧಗಳು ಉಳಿಯಬೇಕಾದರೆ ಇಂತಹ ಜನಪರ ಕಾರ್ಯಕ್ರಮಗಳು ನಡೆಯಬೇಕು ಎಂದರು. ಜಗದೀಶ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.