ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ ತಾಲೂಕಿನ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಡಿ.22ರಿಂದ 26ರವರೆಗೆ ನಡೆಯಲಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅವರು ಸೋಮವಾರ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಊರ, ಪರವೂರ ಆಸ್ತಿಕ ಬಾಂಧವರ ಸಂಪೂರ್ಣ ಸಹಕಾರದೊಂದಿಗೆ ನಿರ್ಮಿಸಲಾಗಿದ್ದು, ವಿಶೇಷವಾದ ವಾಸ್ತುಶಿಲ್ಪದಿಂದ ರಚಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, 26ರಂದು ಭಾನುವಾರ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಮಹಾಗಣಪತಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ನಾಗಪ್ರತಿಷ್ಠೆ ಮತ್ತು ಅಷ್ಟೋತ್ತರ ಶತ ನಾಳಿಕೇರ ಗಣಪತಿ ಯಾಗ ವೇ.ಮೂ.ಮುನಿಯಾಲು ಕುಮಾರ ಸುಬ್ರಹ್ಮಣ್ಯ ಭಟ್ಟರ ದಿವ್ಯಹಸ್ತದಿಂದ ಮಾದಕಟ್ಟೆ ಈಶ್ವರ ಭಟ್ ಉಪಸ್ಥಿತಿಯಲ್ಲಿ ನೆರವೇರಲಿದೆ. 22ರಂದು ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದಿಂದ ಸಂಜೆ 4ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸಾಗಲಿದೆ. ಸಂಜೆ 5.30ಕ್ಕೆ ಉಗ್ರಾಣ ಮುಹೂರ್ತ ನೆರವೇರಲಿದ್ದು, 23, 24 ಮತ್ತು 25ರಂದು ವಿವಿಧ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳು ನೆರವೇರಲಿವೆ. 25ರಂದು ಆಯುತ ಸಂಖ್ಯಾಕ ಮೋದಕ ಹವನ ಬೆಳಗ್ಗೆ ನಡೆಯಲಿದ್ದು, ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 26ರಂದು ಬ್ರಹ್ಮಕಲಶಾಭಿಷೇಕ ಬೆಳಗ್ಗೆ 10.09ರ ಕುಂಭ ಲಗ್ನದಲ್ಲಿ ನೆರವೇರಲಿದ್ದು, ಬೆಳಗ್ಗೆ 11ಕ್ಕೆ ಮತ್ತು ಸಂಜೆ 6ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಡಾ. ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳು ಆಶೀರ್ವಚನ ನೀಡುವರು. ಸಂಜೆ ಶಾಸಕ ರಾಜೇಶ್ ನಾಯ್ಕ್ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಅಂಗಾರ, ಶಶಿಕಲಾ ಜೊಲ್ಲೆ ಮತ್ತಿತರರು ಭಾಗವಹಿಸುವರು ಎಂದರು. 23ನೇ ಗುರುವಾರದಿಂದ 25ನೇ ಶನಿವಾರದವರೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ, 26ರಂದು ಬೆಳಗ್ಗಿನಿಂದ ಸಂಜೆವರೆಗೆ ಭಜನಾ ಸಂಕೀರ್ತನೆ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಜಯರಾಮ ಹೊಳ್ಳ ನಾಗ್ತಿಮಾರು, ವಿವಿಧ ಸಮಿತಿಗಳ ಪ್ರಮುಖರಾದ ಜನಾರ್ದನ ಕುಲಾಲ್ ಬೊಂಡಾಲ, ದಿನೇಶ್ ಅಮ್ಟೂರು, ಬೊಂಡಾಲ ವಿನೋದ್ ಕುಮಾರ್ ಶೆಟ್ಟಿ, ವಜ್ರನಾಥ ಕಲ್ಲಡ್ಕ, ನಾಗೇಶ್ ಕಲ್ಲಡ್ಕ, ರಾಜಾರಾಮ ಐತಾಳ, ಗಿರಿಧರ್ ಪಿ.ಬಿ. ಬೊಂಡಾಲ, ನಾಗೇಶ್ ಶೆಟ್ಟಿ ಬೊಂಡಾಲ ಉಪಸ್ಥಿತರಿದ್ದರು,