ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಹಿಂದು ಜಾಗರಣಾ ವೇದಿಕೆಯ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು.
ಬೆಳಗ್ಗೆ ಭಜನಾ ಕಾರ್ಯಕ್ರಮಗಳು ನಡೆದ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಅದಾದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರೂ, ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರೂ ಆಗಿರುವ ಡಾ. ಪಿ.ಅನಂತಕೃಷ್ಣ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಅಯೋಧ್ಯೆಯಲ್ಲಿ 1992ರಲ್ಲಿ ನಡೆದ ಕರಸೇವೆಯ ಪೂರ್ವದಲ್ಲಿ ಮತ್ತು ಅದಾದ ನಂತರ ನಡೆದ ಘಟನಾವಳಿಗಳ ಕುರಿತು ಬೆಳಕು ಚೆಲ್ಲಿದ ಡಾ. ಭಟ್, ರಾಮಮಂದಿರ ನಿರ್ಮಾಣದ ಕನಸಿನೊಂದಿಗೆ ಹಿಂದು ಬಾಂಧವರ, ಕರಸೇವಕರ ತ್ಯಾಗದ ಫಲವಾಗಿ ಇಂದು ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಇದರ ಜತೆಗೆ ರಾಮನ ಆದರ್ಶಗಳ ಪಾಲನೆ ಅಗತ್ಯ ಎಂದರು.
ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಪ್ರಕ್ರಿಯೆಗಳು ನಡೆಯುತ್ತಿದೆ. ಭಕ್ತರು ಸೇವಾರೂಪವಾಗಿ ತಮ್ಮ ಶ್ರಮದಾನವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮಂದಿರ ಪೂರ್ತಿ ನಿರ್ಮಾಣವಾಗುವವರೆಗೂ ನಿಲ್ಲದಿರಲಿ, ಹಿಂದು ಸಮಾಜ ಜಾಗೃತಿಗೆ ಇದು ಪೂರಕವಾಗಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ಹಿಂಜಾವೇ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ.ಉಲ್ಲಾಸ್, ಹಿಂಜಾವೇ ಜಿಲ್ಲಾಧ್ಯಕ್ಷ ಜಗದೀಶ ನೆತ್ತರಕೆರೆ, ಹಿಂಜಾವೇ ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದು ಸುರಕ್ಷಾ ನಿಧಿಗೆ ಬಂಟ್ವಾಳದ ವತಿಯಿಂದ ಸಮರ್ಪಣಾ ಕಾರ್ಯ ನಡೆಯಿತು. ರಮೇಶ್ ವಗ್ಗ ಸ್ವಾಗತಿಸಿದರು. ಮನೋಜ್ ಪೆರ್ನೆ ವಂದಿಸಿದರು. ಸುರೇಶ್ ನಾವುರ ಕಾರ್ಯಕ್ರಮ ನಿರ್ವಹಿಸಿದರು.