ಕವರ್ ಸ್ಟೋರಿ

ವಿಶೇಷ ಮಕ್ಕಳ ಪಾಲನೆ – ಬಂಟ್ವಾಳ ಲಯನ್ಸ್ ಕ್ಲಬ್ ಹೃದಯವಂತಿಕೆ

ಬಂಟ್ವಾಳನ್ಯೂಸ್ ವರದಿ www.bantwalnews.com REPORT

ಬಂಟ್ವಾಳ ಲಯನ್ಸ್ ಕ್ಲಬ್ ನಲ್ಲಿರುವ ನಿರ್ಮಲ ಹೃದಯ ಪಾಲನಾ ಕೇಂದ್ರ

ಹರೀಶ ಮಾಂಬಾಡಿ

411 ಮಕ್ಕಳ ಸಹಿತ ನೋಂದಾಯಿತ 3927 ಮಂದಿ ಭಿನ್ನ ಸಾಮರ್ಥ್ಯದ (ವಿಕಲಚೇತನ)ವರು ಇರುವ ಬಂಟ್ವಾಳ ತಾಲೂಕಿನಲ್ಲಿ ಸರ್ಕಾರದ ವತಿಯಿಂದ ಇದುವರೆಗೂ ಒಂದೇ ಒಂದು ಪಾಲನಾ ಕೇಂದ್ರವಾಗಲೀ, ವಿಶೇಷ ಮಕ್ಕಳ ಶಾಲೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿಲ್ಲ. ಆದರೆ ಲಯನ್ಸ್ ಸಂಸ್ಥೆ ವತಿಯಿಂದ ನಿರ್ಮಲ ಹೃದಯ ವಿಶೇಷ ಮಕ್ಕಳ ಪಾಲನಾ ಕೇಂದ್ರವು ದಾನಿಗಳ ನೆರವಿನೊಂದಿಗೆ ಕಳೆದ 11 ವರ್ಷಗಳಿಂದ ಉಚಿತವಾಗಿ ಕಾರ್ಯಾಚರಿಸುತ್ತಿದ್ದು, ಸದ್ಯಕ್ಕೆ ಬಡ ಕುಟುಂಬಗಳ ವಿಶೇಷ ಮಕ್ಕಳ ಪೋಷಕರಿಗೆ ಇದೊಂದೇ ಆಶಾಕಿರಣ.

ಜಾಹೀರಾತು

ಅಂಗವೈಕಲ್ಯ, ಬುದ್ಧಿ, ದೈಹಿಕ ವೈಕಲ್ಯ ಉಳ್ಳ, ಭಿನ್ನ ಸಾಮರ್ಥ್ಯದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ, ಆ ಮಕ್ಕಳನ್ನು ಇತರ ಮಕ್ಕಳಷ್ಟೇ ಸಮರ್ಥರನ್ನಾಗಿ ರೂಪಿಸುವ ಕೆಲಸ ಕಷ್ಟವಾದದ್ದೇ. ಶಾಲೆಗಳಲ್ಲಿ ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕವಾದ ಗಮನಹರಿಸಬೇಕು ಎಂಬ ನಿಯಮಾವಳಿಗಳನ್ನು ರೂಪಿಸಲಾದರೂ ಇರುವ ಮಕ್ಕಳನ್ನು ನೋಡಲೂ ಶಿಕ್ಷಕರಿಗೆ ಸಮಯದ ಕೊರತೆ ಇರುತ್ತದೆ. ಇಂಥ ಸಂದರ್ಭ ಬೆಳೆಯುವ ಹಂತದಲ್ಲಿ ಮಾತನಾಡಲು, ಓದು ಬರೆಯಲು ಹಾಗೂ ಓಡಾಡಲು, ಆಟ, ಪಾಠಗಳಲ್ಲಿ ತೊಡಗಿಸಿಕೊಳ್ಳಲು ಮಕ್ಕಳನ್ನು ತಯಾರು ಮಾಡುವುದು ಹೆತ್ತವರಿಗೆ ದೊಡ್ಡ ಸವಾಲು. ಪ್ರತಿ ವರ್ಷದ ವಿಶ್ವ ವಿಕಲಚೇತನರ ದಿನ ಬಂದಾಗ, ಮಕ್ಕಳನ್ನು ಪ್ರೋತ್ಸಾಹಿಸಿ ಎಂಬ ಸಲಹೆಗಳು ಬರುತ್ತವೆಯೇ ಹೊರತು ಕಾರ್ಯರೂಪಕ್ಕೆ ಅವು ಇಳಿಯುವುದಿಲ್ಲ ಎಂಬ ಮಾತಿಗೆ ಉತ್ತರವಾಗಿ ಲಯನ್ಸ್ ಕ್ಲಬ್ ಬಂಟ್ವಾಳ 2010ರಲ್ಲಿ ದಾಮೋದರ್ ಬಿ.ಎಂ. ಅಧ್ಯಕ್ಷರಾಗಿದ್ದ ಸಂದರ್ಭ ಲಯನ್ಸ್ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಲ ಹೃದಯ ವಿಶೇಷ ಮಕ್ಕಳ ಪಾಲನಾ ಕೇಂದ್ರವನ್ನು ದಾನಿಗಳ ನೆರವಿನೊಂದಿಗೆ ಆರಂಭಿಸಿತು. ಅಂದಿನಿಂದ ಇಂದಿನವರೆಗೆ ಇದರ ಸಂಚಾಲಕರಾಗಿ ದಾಮೋದರ್ ಅವರು ಮುನ್ನಡೆಸುತ್ತಿದ್ದಾರೆ. ವಿಶೇಷವೆಂದರೆ ಯಾವುದೇ ಶುಲ್ಕ ಇದಕ್ಕಿಲ್ಲ.

ಹೇಗೆ ಕಾರ್ಯಾಚರಿಸುತ್ತದೆ: 3 ವರ್ಷಕ್ಕೆ ಮೇಲ್ಪಟ್ಟ ಸುಮಾರು 35ಕ್ಕೂ ಅಧಿಕ ಮಕ್ಕಳು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗಿನ ಅವಧಿಯಲ್ಲಿ ಕಾರ್ಯಾಚರಿಸುವ ಪಾಲನಾ ಕೇಂದ್ರಕ್ಕೆ ಬರುತ್ತಾರೆ. ಬಂಟ್ವಾಳ ತಾಲೂಕಿನ ಮೂಲೆಮೂಲೆಗಳಿಂದ ಬರುವವರಲ್ಲಿ ಹೆಚ್ಚಿನವರು ಬಡವರು. ಮಂಗಳೂರಿನ ಸೇವಾಭಾರತಿ ಮತ್ತು ಚೇತನಾ ಫಿಸಿಯೋಥೆರಪಿ ಕೇಂದ್ರ, ಕೆ.ಎಸ್.ಹೆಗ್ಡೆ ಆಸ್ಪತ್ರೆ ಮಂಗಳೂರು ಇಲ್ಲಿಂದ ಗುರುವಾರ ಮತ್ತು ಸೋಮವಾರ ವೈದ್ಯರು ಆಗಮಿಸುತ್ತಾರೆ. ಸೋಮವಾರದಿಂದ ಶನಿವಾರದವರೆಗೆ ಇಬ್ಬರು ಥೆರಪಿಸ್ಟ್ ಗಳು ಮತ್ತು ಒಬ್ಬರು ಸಹಾಯಕಿ ಇರುತ್ತಾರೆ ಡಾ. ಸಂಜಯ್ ಮತ್ತು ತಂಡ ಮಕ್ಕಳ ತಪಾಸಣೆ ನಡೆಸಿ ಬೇಕಾದ ಥೆರಪಿಗಳನ್ನು ಸೂಚಿಸುತ್ತದೆ ಎಂದು ದಾಮೋದರ್ ಹೇಳಿದರು.

ಆರಂಭದಲ್ಲಿ ಇಲ್ಲಿ 7 ಮಕ್ಕಳು ಬರುತ್ತಿದ್ದರು. ಈಗ 37 ಮಂದಿ ರೆಗ್ಯುಲರ್ ಆಗಿ ಬರುತ್ತಾರೆ ಎನ್ನುತ್ತಾರೆ ದಾಮೋದರ್. ಬಂದವರಲ್ಲಿ ದೈಹಿಕ ನ್ಯೂನತೆಗಳಿರುವವರು ಸ್ವತಂತ್ರವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವವರಾಗಿ ಪರಿವರ್ತಿತರಾಗಿದ್ದು ವಿಶೇಷ.

ಆರ್ಥಿಕ ಶಕ್ತಿ: ಲಯನ್ಸ್ ಸೇವಾ ಮಂದಿರದಲ್ಲಿ ಕಾರ್ಯಕ್ರಮಗಳಿಂದ ಪಡೆಯುವ ಬಾಡಿಗೆ ಹಾಗೂ ಲಯನ್ಸ್ ಸೇವಾ ಟ್ರಸ್ಟ್ ಮಾರ್ಗದರ್ಶನದಲ್ಲಿ ಈ ಪಾಲನಾ ಕೇಂದ್ರ ಮುನ್ನಡೆಯುತ್ತಿದೆ. ಆರಂಭದ ವೇಳೆ ಸೇವಾಭಾರತಿಯ ಡಾ.ಯು.ವಿ. ಶೆಣೈ ಪ್ರೋತ್ಸಾಹ ಕೊಟ್ಟಿದ್ದರು. ಈಗಿನ ಅಧ್ಯಕ್ಷ ಡಾ. ವಸಂತ ಬಾಳಿಗಾ, ಲಯನ್ಸ್ ಗವರ್ನರ್ ವಸಂತಕುಮಾರ್ ಶೆಟ್ಟಿ ಮಾರ್ಗದರ್ಶನ ಮೈಸೂರಿನ ಗಣೇಶ ಬೀಡಿ ಸಂಸ್ಥೆ ಹಾಗೂ ದಾನಿಗಳಾದ ಎಸ್.ಎಂ. ಜನಾರ್ದನ ಆಚಾರ್ಯ ಅವರ ಕೊಡುಗೆ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ಐಐಆರ್ಟಿಯ ರವೀಂದ್ರ ಮತ್ತು ಬಳಗ, ಡಾ. ಸಂಜಯ್ ಮತ್ತು ಬಳಗದ ಸೇವೆ ಇದಕ್ಕಿದೆ ಎನ್ನುತ್ತಾರೆ ಟ್ರಸ್ಟಿನ ಕೋಶಾಧಿಕಾರಿ ಮತ್ತು ಕೇಂದ್ರದ ಸಂಚಾಲಕ ದಾಮೋದರ್ ಬಿ.ಎಂ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.