ಬಂಟ್ವಾಳ: ತುಂಬೆ ಡ್ಯಾಂನಿಂದ ಹೊರಬರುವ ನೀರಿನಿಂದ ಕೃಷಿ ಭೂಮಿ ನದಿ ಪಾಲಾಗಿರುವುದಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ತುಂಬೆ ಗ್ರಾಮದ ಕೃಷಿ ಭೂಮಿ ಪ್ರದೇಶಕ್ಕೆ ಗ್ರಾ.ಪಂ.ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಬಿ.ತುಂಬೆ ಮಾತನಾಡಿ ಜಿಲ್ಲಾಡಳಿತ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೃಷಿಕರಿಗೆ ನ್ಯಾಯ ಕೊಡಬೇಕಿದೆ ಎಂದರು.
ಗ್ರಾ.ಪಂ.ಸದಸ್ಯ ಮಹಮ್ಮದ್ ವಳವೂರು ಮಾತನಾಡಿ, ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗೆ ತತ್‌ಕ್ಷಣ ಕ್ರಮಕೈಗೊಳ್ಳುವುದು ಅತಿ ಅಗತ್ಯವಾಗಿದೆ ಎಂದರು. ಸ್ಥಳೀಯ ಕೃಷಿಕರಾದ ಲೋಕಯ್ಯ, ಭಾಸ್ಕರ, ಗಂಗಾಧರ, ಪುರುಷೋತ್ತಮ, ಲಿಂಗಪ್ಪ, ಆನಂದ ಶೆಟ್ಟಿ, ಮೊಯಿದ್ದೀನ್ ಅವರ ಕೃಷಿ ಭೂಮಿ ನಾಶವಾಗಿದೆ. ಸುಮಾರು 250ಕ್ಕೂ ಅಧಿಕ ಅಡಿಕೆ ಗಿಡ, ಬಾಳೆ ಗಿಡ, 60ಕ್ಕೂ ಅಧಿಕ ತೆಂಗಿನಮರಗಳು ಈಗಾಗಲೇ ನದಿ ಪಾಲಾಗಿವೆ. 1.22 ಎಕ್ರೆ ಪ್ರದೇಶದಲ್ಲಿ ೫೦ ಸೆಂಟ್ಸ್ ಪ್ರದೇಶ ಈಗಾಗಲೇ ನದಿ ಪಾಲಾಗಿದೆ ಎಂದು ಕೃಷಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ನಿಯೋಗದಲ್ಲಿದ್ದರು.