ಬಂಟ್ವಾಳ : ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ನೂತನ ಕಟ್ಟಡವು ಮಾಣಿ ಜಂಕ್ಷನ್ ನಿಂದ 600 ಮೀಟರ್ ದೂರದ ವಿದ್ಯಾನಗರ ಪಾಳ್ಯದಲ್ಲಿ ನಿರ್ಮಾಣಗೊಳ್ಳಲಿದ್ದು, ನ.27 ರಂದು ಶಿಲಾನ್ಯಾಸ ನೆರವೇರಲಿದೆ ಎಂದು ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಸಿ.ಶ್ರೀಧರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1989 ರಲ್ಲಿ ಶ್ರೀ ವಿದ್ಯಾ ಆಂಗ್ಲಮಾಧ್ಯಮ ಶಾಲೆ ಎನ್ನುವ ಹೆಸರಿನಲ್ಲಿ ಆರಂಭಗೊಂಡು ನಂತರದ ದಿನಗಳಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಎಂದು ಹೆಸರು ಪಡೆದುಕೊಂಡು ಕಳೆದ 32 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತರವಾದ ಸಾಧನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗಾಗಿ ಸದ್ರಿ ಶಾಲಾ ಕಟ್ಟಡವನ್ನು ತೆರವುಗೊಳಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಮಾಣಿ-ಮೈಸೂರು ರಸ್ತೆಯ ವಿದ್ಯಾನಗರ ಪಾಳ್ಯದಲ್ಲಿ 12 ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಶಾಲಾ ಆಡಳಿತ ಮಂಡಳಿ ಯೋಜನೆ ರೂಪಿಸಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿಯೇ ನೂತನ ಕಟ್ಟಡದ ತರಗತಿ ಕೋಣೆಗಳನ್ನು ವಿನ್ಯಾಸಗೊಳಿಸಲಾಗಿದ್ದು ಮುಂದಿನ ಜೂನ್ ಗೆ ನೂತನ ಕಟ್ಟಡದಲ್ಲಿಯೇ ಶಾಲೆ ಮುನ್ನಡೆಸಬೇಕೆಂಬ ಇರಾದೆ ಇರಿಸಿಕೊಳ್ಳಲಾಗಿದೆ ಎಂದವರು ತಿಳಿಸಿದರು. ಶನಿವಾರ ಅಪರಾಹ್ನ 12 ಗಂಟೆಗೆ ನಡೆಯಲಿದ್ದು ಪುತ್ತೂರು ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವರು. ಪಿ.ಎಸ್.ಸಚ್ಚಿದಾನಂದ ರೈ ಪಾಳ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಮಾದರಿ ಶಾಲೆಯ ಕಲ್ಪನೆಯಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾಗಿ ಪಠ್ಯ ಹಾಗೂ ಸಹ ಪಠ್ಯಚಟುವಟಿಕೆಗಳನ್ನೂ ಅಳವಡಿಸಲಾಗಿದೆ. ಯೋಗ, ನಾಟಕ, ಯಕ್ಷಗಾನ, ಸಂಗೀತ, ಭರತನಾಟ್ಯ ಮೊದಲಾದ ಕಲೆಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಸ್.ನಾಯ್ಕ್, ಟ್ರಸ್ಟಿ ಪುಷ್ಪರಾಜ ಹೆಗ್ಡೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಶೆಟ್ಟಿ, ಶಾಲಾ ಮುಖ್ಯ ಶೈಕ್ಷಣಿಕ ಅಧಿಕಾರಿ ರವೀಂದ್ರ ಡಿ. ,ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ವಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.