ಬಂಟ್ವಾಳನ್ಯೂಸ್ ವರದಿ
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಚುನಾವಣೆ ಇಂದು ನಡೆಯುತ್ತಿದ್ದು, ಬಂಟ್ವಾಳ ತಾಲೂಕಿನ ಎರಡು ಮತಗಟ್ಟೆಗಳಾದ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮತ್ತು ವಿಟ್ಲ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮತದಾನಕ್ಕೆ ವೇಗ ದೊರಕಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರತ್ಯೇಕ ಮತಪತ್ರಗಳನ್ನು ನೀಡಲಾಗುತ್ತಿದ್ದು, ಮತದಾರರು ತಮ್ಮ ಕಸಾಪ ಗುರುತಿನ ಚೀಟಿ ಅಥವಾ ತಮ್ಮ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ತರಬೇಕಾಗಿದ್ದು, ಕಸಾಪ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೆ, ಮತದಾನ ಮಾಡಬಹುದಾಗಿದೆ. ವಿಟ್ಲ ಹೋಬಳಿಯವರಿಗೆ ವಿಟ್ಲದಲ್ಲಿ ಬಂಟ್ವಾಳ ದವರಿಗೆ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಮತದಾನ ಮಾಡಲು ಅವಕಾಶವಿದೆ.
ಮತದಾನಸಂಜೆ 4 ಗಂಟೆವರೆಗೆ ನಡೆಯಲಿದೆ. ಮಿನಿ ವಿಧಾನಸೌಧದ ಮತಗಟ್ಟೆಯಲ್ಲಿ 247 ಮತದಾರರು ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ 168 ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶವಿದೆ. ಮತದಾನ ಮುಗಿದ ಬಳಿಕ ಅದೇ ಕೇಂದ್ರದಲ್ಲಿ ಮತ ಎಣಿಕೆ ಮಾಡಿ ಅಭ್ಯರ್ಥಿಗಳು ಪಡೆದ ಮತಗಳ ಅಂಕಿ, ಅಂಶಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಂಗಳೂರಿನ ಎಂ.ಆರ್.ವಾಸುದೇವ ಮತ್ತು ಉಜಿರೆಯ ಡಾ. ಎಂ.ಪಿ.ಶ್ರೀನಾಥ್ ಸ್ಪರ್ಧೆಗಿಳಿದಿದ್ದಾರೆ. ಈಗಾಗಲೇ ಇಬ್ಬರೂ ಅಭ್ಯರ್ಥಿಗಳು ಮತಯಾಚಣೆ ಮಾಡಿದ್ದು,ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ವೈಯಕ್ತಿಕ ಭೇಟಿ ಮೂಲಕ ಮತಯಾಚನೆಗಳು ನಡೆದಿದೆ.