ಬಂಟ್ವಾಳ: ವಿಮಾನ ನಿಲ್ದಾಣ ನಿರ್ದೇಶಕನಾಗಿ ನಿವೃತ್ತನಾದ ಮೇಲೆ ಪೂರ್ಣಪ್ರಮಾಣದಲ್ಲಿ ಸಾಹಿತ್ಯ ಚಟುವಟಿಕೆ, ಸಂಘಟನೆಯಲ್ಲಿ ಪ್ರವೃತ್ತನಾಗಿದ್ದು, ಜಿಲ್ಲಾಧ್ಯಕ್ಷನಾಗಿ ಗೆದ್ದರೆ ದಿನಪೂರ್ತಿ ಸೇವೆ ಸಲ್ಲಿಸಲು ಬದ್ಧ, ಸುಮಾರು 1500ಕ್ಕೂ ಅಧಿಕ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದ್ದು, ಮತದಾರರು ಉತ್ತಮ ಸ್ಪಂದನೆ ತೋರಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಎಂ.ಆರ್.ವಾಸುದೇವ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಹಲವರು ಆ ವಿಳಾಸದಲ್ಲಿ ಇಲ್ಲ ಎಂಬುದು ಜಿಲ್ಲಾ ಸಂಚಾರದಿಂದ ಗೊತ್ತಾಯಿತು. ಭವಿಷ್ಯದಲ್ಲಿ ಯುವಕರನ್ನು ಹೆಚ್ಚು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು, ಬೆಳಕಿಗೆ ಬಾರದ ಹಳ್ಳಿಯ ಸಾಹಿತಿಗಳಿಗೆ ಅವಕಾಶ ನೀಡುವುದು, ಕನ್ನಡ ಭವನ ಜಿಲ್ಲೆಯಲ್ಲಿ ನಿರ್ಮಾಣ ಸಹಿತ ವಿವಿಧ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು. ಸಾಹಿತ್ಯ ಪರಿಷತ್ ಅಧ್ಯಕ್ಷನಾಗುವವ ಫುಲ್ ಟೈಮ್ ಆಗಿ ಕೆಲಸ ಮಾಡಿದರೆ ಪರಿಷತ್ತನ್ನು ಸಕ್ರಿಯವಾಗಿರಿಸಬಹುದು ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೈಯೂರು ನಾರಾಯಣ ಭಟ್, ಜಯಂತ್ ನಾಯಕ್, ಉಮ್ಮರ್ ಮಂಚಿ, ಜಯರಾಮ ಪೂಜಾರಿ, ಅನಾರು ಕೃಷ್ಣ ಶರ್ಮ, ಬದ್ರುದ್ದೀನ್, ಕೃಷ್ಣ, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.