ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯ ಶ್ರೀ ಕ್ಷೇತ್ರ ಕಾರಿಂಜದ ಸಂರಕ್ಷಣೆಗೆ ಹಿಂದೂ ಜಾಗರಣ ವೇದಿಕೆಯ ಬಂಟ್ವಾಳ ತಾಲೂಕು ಘಟಕದ ವತಿಯಿಂದ ರುದ್ರಗಿರಿಯ ರಣಕಹಳೆ ಕಾರಿಂಜ ಕ್ಷೇತ್ರದ ಕಡೆಗೆ ಜಾಗರಣದ ವೀರ ನಡಿಗೆ ಜನಜಾಗೃತಿ ಸಭೆ ನ.21ರಂದು ಅಪರಾಹ್ನ ನಡೆಯಲಿದೆ ಎಂದು ಹಿಂದು ಜಾಗರಣಾ ವೇದಿಕೆಯ ಹಿರಿಯ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಧ್ಯಾಹ್ನ 2.30ರಿಂದ ವಗ್ಗ ಕೇಂದ್ರಸ್ಥಾನದಿಂದ ಕಾರ್ಯಕರ್ತರು ಹಾಗೂ ಹಿಂದೂ ಸಮಾಜದ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಕಾಲ್ನಡಿಗೆಯ ಮೂಲಕ ಶ್ರೀ ಕಾರಿಂಜೇಶ್ವರ ಕ್ಷೇತ್ರಕ್ಕೆ ತೆರಳಲಿದ್ದಾರೆ ಎಂದರು.ದೇವಳದ ರಥಬೀದಿಯಲ್ಲಿ ಶೋಭಾಯಾತ್ರೆ ಸಂಪನ್ನಗೊಳ್ಳಲಿದ್ದು,ಬಳಿಕ ನಡೆಯುವ ಬೃಹತ್ ಜನಜಾಗೃತಿ ಸಭೆಯನ್ನುದ್ದೇಶಿಸಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಬಂಟ್ವಾಳ ತಾ.ಘಟಕದ ಕಾರ್ಯದರ್ಶಿ ಪದ್ಮನಾಭ ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸುಮಾರು 6 ಕಿ.ಮೀ.ಪ್ರದೇಶದಲ್ಲಿ ವ್ಯಾಪಿಸಿರುವ ಕಾರಿಂಜ ದೇವಳದ ಅಸ್ತಿತ್ವಕ್ಕೆ ಗಂಡಾಂತರ ಉಂಟಾಗಿದೆ, ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದೆ, ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದರು. ಹಿಂದೂ ಸಮಾಜವನ್ನು ಬಡಿದೆಬ್ಬಿಸಿ,ಪವಿತ್ರ ಕಾರಿಂಜ ಕ್ಷೇತ್ರದ ರಕ್ಷಣೆಗಾಗಿ ಜನಜಾಗೃತಿಯ ಮೂಲಕ ಈ ರಣಕಹಳೆ ಮೊಳಗಿಸಲಾಗತ್ತದೆ ಎಂದರು. ಪ್ರಮುಖರಾದ ಜಗದೀಶ್ ನೆತ್ತರಕೆರೆ,ತಿರುಲೇಶ್ ಬೆಳ್ಳೂರು,ಬಾಲಕೃಷ್ಣ ಕಲಾಯಿ,ಪ್ರಶಾಂತ್ ಕೆಂಷುಗುಡ್ಡೆ,ಯೋಗೀಶ್,ರವಿ ಕೆಂಪುಗುಡ್ಡೆ, ತಿಲಕ್ ಅಮ್ಟಾಡಿ,ಚಂದ್ರಕಲಾಯಿ ಮೊದಲಾದವರಿದ್ದರು.