ಬಂಟ್ವಾಳ: ಬಂಟ್ವಾಳ ತಾಲೂಕಿನ ಎರಡು ಕಡೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನ ಕೇಂದ್ರಗಳನ್ನು ರಚಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನವೆಂಬರ್ 21ರಂದು ನಡೆಯಲಿದ್ದು, ಬಂಟ್ವಾಳ ಮಿನಿ ವಿಧಾನಸೌಧದಲ್ಲಿ 1 ಹಾಗೂ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ 1 ಹೀಗೆ ಒಟ್ಟು 2 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.
ಮತದಾನವು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಮಿನಿ ವಿಧಾನಸೌಧದ ಮತಗಟ್ಟೆಯಲ್ಲಿ 247 ಮತದಾರರು ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ 168 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಮುಗಿದ ಬಳಿಕ ಅದೇ ಕೇಂದ್ರದಲ್ಲಿ ಮತ ಎಣಿಕೆ ಮಾಡಿ ಅಭ್ಯರ್ಥಿಗಳು ಪಡೆದ ಮತಗಳ ಅಂಕಿ, ಅಂಶಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಗಳೂರಿನ ಎಂ.ಆರ್.ವಾಸುದೇವ ಮತ್ತು ಉಜಿರೆಯ ಡಾ. ಎಂ.ಪಿ.ಶ್ರೀನಾಥ್ ಸ್ಪರ್ಧೆಗಿಳಿದಿದ್ದಾರೆ. ಈಗಾಗಲೇ ಇಬ್ಬರೂ ಅಭ್ಯರ್ಥಿಗಳು ಮತಯಾಚಣೆ ಮಾಡಿದ್ದು, ಅವರ ಬೆಂಬಲಿಗರೂ ಮತಯಾಚನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ವೈಯಕ್ತಿಕ ಭೇಟಿ ಮೂಲಕ ಮತಯಾಚನೆಗಳು ನಡೆಯುತ್ತಿವೆ. ಮತದಾರರ ಪಟ್ಟಿಯಲ್ಲಿ ಇರುವವರಲ್ಲಿ ಕೆಲವರು ಈಗ ಮೃತಪಟ್ಟಿದ್ದರೆ, ಕೆಲವರು ಊರಲ್ಲಿಲ್ಲ ಎಂಬುದೂ ಇಲ್ಲಿ ಗಮನಾರ್ಹ.