ಬಂಟ್ವಾಳ: ಬಂಟ್ವಾಳ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಕಾರಿಂಜ ಪರ್ವತದಲ್ಲಿ ಶ್ರೀ ಕಾರಿಂಜೇಶ್ವರ ದೇವಸ್ಥಾನವನ್ನು ಅಪವಿತ್ರಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ನಾಲ್ವರನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಬುಶೇರ್ ರೆಹಮಾನ (20), ಇಸ್ಮಾಯಿಲ್ ಅರ್ಹ ಮಾಜ್ (22), ಮಹಮ್ಮದ್ ತಾನಿಶ್ (19), ಮೊಹಮ್ಮದ್ ರಶಾದ್(19) ಬಂಧಿತರು. ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ. ಘಟನೆ ನಡೆದು, ವಿಡಿಯೋ ವೈರಲ್ ಆದ ವಿಷಯ ತಿಳಿದ ತಕ್ಷಣ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉನ್ನತ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ತಿಳಿಸಿ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.ಈ ರೀತಿಯ ಘಟನೆಗಳು ಇತ್ತೀಚೆಗಿನ ದಿನಗಳಲ್ಲಿ ಅಲ್ಲಲ್ಲಿ ನಡೆಯುತ್ತಿದ್ದು ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಂಟ್ವಾಳದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸಿದ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಕಾನೂನು ರಿತ್ಯ ಕ್ರಮ ಪೋಲಿಸ್ ಇಲಾಖೆ ಕೈಗೊಳ್ಳಲು ಸೂಚಿಸಿದ ಬಳಿಕ ಕ್ಷಿಪ್ರ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಶಾಸಕರ ಕಾಳಜಿಗೆ ಬಿಜೆಪಿ ಯುವ ಮೋರ್ಚಾ ಅಭಿನಂದಿಸುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ತಿಳಿಸಿದ್ದಾರೆ.
ಕಿಡಿಗೇಡಿಗಳು ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಾಸ್ಥಾನಕ್ಕೆ ಚಪ್ಪಲಿ ಧರಿಸಿಕೊಂಡು ಪ್ರವೇಶ ಮಾಡಿ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟು ಮಾಡಿ ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿರುವ ವಿಡಿಯೋವನ್ನು ಹರಿಯಬಿಟ್ಟಿದ್ದು, ಅಕ್ಟೋಬರ್ ೧೦ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ