ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಸೋಮವಾರ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ತುಳುನಾಡಿನವರು ಕನ್ನಡಕ್ಕೆ ವಿಶೇಷ ಪ್ರಾಧಾನ್ಯತೆಯನ್ನು ಕೊಟ್ಟಿದ್ದು, ಮುಂದೆಯೂ ಕನ್ನಡದ ಬೆಳವಣಿಗೆಗೆ ನಾವು ದುಡಿಯುವ ಅಗತ್ಯವಿದೆ ಎಂದರು.
ಧ್ವಜಾರೋಹಣ ಮಾಡಿದ ತಹಸೀಲ್ದಾರ್ ರಶ್ಮಿ ಎಸ್.ಆರ್.ಮಾತನಾಡಿ, ಕನ್ನಡದ ಬೆಳವಣಿಗೆಗೆ ಇಲ್ಲಿನ ಸರಕಾರಿ ಶಾಲೆಗಳು ಹೆಚ್ಚಿನ ಕೊಡುಗೆ ನೀಡಿದ್ದು, ಅಂತಹ ಶಾಲೆಗಳನ್ನು ಬೆಳೆಸುವ ಕಾರ್ಯ ಮಾಡೋಣ ಎಂದರು. ಬೆಂಜನಪದವು ಸರಕಾರಿ ಪ.ಪೂ.ಕಾಲೇಜಿನ ಪ್ರಾಧ್ಯಾಪಕ ಅನಂತ ಪದ್ಮನಾಭ ಶಿಬರೂರು ಪ್ರಧಾನ ಭಾಷಣ ಮಾಡಿದರು. ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ ಕೆಲವು ದಿನಗಳ ಹಿಂದೆ ಅಗಲಿದ ಚಿತ್ರನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮೌನಪ್ರಾರ್ಥನೆಯ ಗೌರವ ಸಲ್ಲಿಸಲಾಯಿತು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಸ್ವಾಗತಿಸಿದರು. ತಾ.ಪಂ.ಸಹಾಯಕ ನಿರ್ದೇಶಕ ದಿನೇಶ್ ವಂದಿಸಿದರು. ಹಿರಿಯ ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಕೇಂದ್ರ ಸ್ಥಾನಿಯ ಶಿರಸ್ತೇದಾರ್ ನರೇಂದ್ರ ನಾಥ್ ಭಟ್ ಮಿತ್ತೂರು, ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ, ನವೀನ್ ಬೆಂಜನಪದವು, ಕಂದಾಯ ನಿರೀಕ್ಷಕರಾದ ಧರ್ಮ ಸಾಮ್ರಾಜ್ಯ, ಕುಮಾರ್ ಟಿ.ಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.