ಬಂಟ್ವಾಳ: ಬಂಟ್ವಾಳ ತಾ. ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 4 ನೇ ವರ್ಷದ ಸ್ನೇಹ ಕೂಟ,ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಭಾನುವಾಋ ಚಾಲನೆ ನೀಡಲಾಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಂಬಳ ಜಾತಿ ಮತ, ಧರ್ಮಗಳ ಬೇಧವಿಲ್ಲದೆ ನಡೆಯುವ ಜಾನಪದ ಹಾಗೂ ಭಾವೈಕ್ಯತೆಯನ್ನು ಒಟ್ಟುಗೂಡಿಸುವ ಕ್ರೀಡೆ ಎಂದು ಹೇಳಿದರು.
ಕಂಬಳ ಕೋಣಗಳ ಯಜಮಾನ ಅಪ್ಪು ಯಾನೆ ವಲೇರಿಯನ್ ಡೇಸಾ ಅವರು ಕಂಬಳ ಕರೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉಳಿ ಗ್ರಾ.ಪಂ.ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ಅವರು ಉದ್ಘಾಟಿಸಿದರು. ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಸಂಚಾಲಕ ಶಿವಾನಂದ ಮೈರ ಅವರು ಮಾತನಾಡಿ, ಕಂಬಳ ಋತುವಿನ ಆರಂಭದ ಪೂರ್ವಭಾವಿಯಾಗಿ ಸ್ನೇಹಕೂಟ ಕಂಬಳದಲ್ಲಿ ನೇಗಿಲು ಕಿರಿಯ ಮತ್ತು ಹಿರಿಯ ವಿಭಾಗಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ ಎಂದರು.ಉಳಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಪೂಜಾರಿ ಮೈರ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಪ್ರಗತಿಪರ ಕೃಷಿಕರಾದ ನಂದರಾಮ ರೈ, ಸುಧಾಕರ ಶೆಟ್ಟಿ ಶಂಕರಬೆಟ್ಟು, ಗೆಳೆಯರ ಬಳಗದ ಅಧ್ಯಕ್ಷ ಮಹೇಂದ್ರ ಕಾಯರ್‌ಗುರಿ, ಪ್ರಮುಖರಾದ ಪ್ರವೀಣ್ ಶೆಟ್ಟಿ ಕಿಂಜಾಲು, ತುಷಾರ್ ಆರ್.ಭಂಡಾರಿ, ಚೇತನ್ ಹೂರ್ದೊಟ್ಟು,ಧನಂಜಯ ಶೆಟ್ಟಿ ನಾಡಬೆಟ್ಟು, ನಾರಾಯಣ ಪೂಜಾರಿ ಡೆಚ್ಚಾರು, ಮೋನಪ್ಪ ಸಾಲ್ಯಾನ್ ಕಕ್ಯ, ವಸಂತ ರಾಮನಗರ, ಶಾಂತಪ್ಪ ಪೂಜಾರಿ ಹಟದಡ್ಕ, ಉಮೇಶ್ ಪೂಜಾರಿ, ಪುರುಷೋತ್ತಮ ಪೂಜಾರಿ ಪಲ್ಕೆ, ಜಸ್ಟಿನ್ ತೋಮಸ್, ಚಂದ್ರಶೇಖರ ಡೆಚ್ಚಾರು, ಕುಸುಮೋಧರ ಉರ್ಕಿ, ಲತೀಶ್ ಕುಕ್ಕಾಜೆ,ರಂಜಿತ್ ಮೈರ ಮತ್ತಿತರರು ಭಾಗವಹಿಸಿದ್ದರು.ತೀರ್ಪುಗಾರರರಾಗಿ ಮತ್ತು ಉದ್ಘೋಷಕರಾಗಿ ದ.ಕ.ಜಿಲ್ಲಾ ಕಂಬಳ ಸಮಿತಿ ವಕ್ತಾರ ರಾಜೀವ ಶೆಟ್ಟಿ ಎಡ್ತೂರು. ಸುಧಾಕರ ಶೆಟ್ಟಿ ಮೊಗೆರೋಡಿ, ಸತೀಶ್ ಹೊಸ್ಮಾರು, ಪ್ರಕಾಶ್ ಕರ್ಲ, ಸುದೀಪ್ ಹೆಗ್ಡೆ ಶಿರ್ವ, ಪ್ರಖ್ಯಾತ್ ಭಂಡಾರಿಮತ್ತಿತರರು ಸಹಕರಿಸಿದ್ದರು. ಶಿವಾನಂದ ಮೈರ ಸ್ವಾಗತಿಸಿದರು. ಪ್ರಕಾಶ್ ಕರ್ಲ, ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಕಂಬಳದ ಕರೆಯಲ್ಲಿ ಬ್ಯಾಂಡ್ ವಾದ್ಯ,ಕೊಂಬು ವಾಲಗ ಸಹಿತ ಮೆರವಣಿಗೆಯಲ್ಲಿ ಓಟದ ಕೋಣಗಳನ್ನು ಕರೆಗಿಳಿಸುವ ಕಾರ್ಯಕ್ರಮ ನಡೆಯಿತು. ನೂರಕ್ಕೂ ಮಿಕ್ಕಿ ಓಟದ ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.