ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗ
ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ ಕುರಿತು ಬಂಟ್ವಾಳದಲ್ಲಿ ಮಾಹಿತಿ ಕಾರ್ಯಾಗಾರವು ಪೊಲೀಸ್ ಇಲಾಖೆ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿ ಮಾತನಾಡಿ, ಯುವಜನತೆಗೆ ಉದ್ಯೋಗಾವಕಾಶಗಳ ಕಾರ್ಯಾಗಾರ ಅತಿ ಅಗತ್ಯವಾಗಿದ್ದು, ರಾಜ್ಯದಲ್ಲಿ ಸಾವಿರಾರು ಮಂದಿ ಪೊಲೀಸ್ ಇಲಾಖೆಗೆ ಸೇರಿದರೆ ನಮ್ಮ ಜಿಲ್ಲೆಯಿಂದ ಬೆರಳೆಣಿಕೆಯ ಮಂದಿ ಸೇರುತ್ತಿದ್ದಾರೆ ಎನ್ನುವುದು ಬಹಳ ಬೇಸರದ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋಣಾವಣೆ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಶಿಸ್ತು ಅತೀ ಅಗತ್ಯವಾಗಿದೆ. ಸೈಬರ್ ಕ್ರೈಮ್, ಮಾದಕ ವಸ್ತುಗಳ ಕುರಿತು ಯುವಜನತೆ ಎಚ್ಚರಿಕೆಯಿಂದಿರಬೇಕು ಎಂದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಶುಭ ಹಾರೈಸಿದರು. ಕಾರ್ಯಾಗಾರದಲ್ಲಿ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಬಂಟ್ವಾಳ ನಗರ ಠಾಣಾ ಇನ್ಸ್‌ಪೆಕ್ಟರ್ ವಿವೇಕಾನಂದ ಉಪಸ್ಥಿತರಿದ್ದರು.
ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಅವರು ಪೊಲೀಸ್ ಹುತಾತ್ಮ ದಿನಾಚರಣೆ ಕುರಿತು ಮಾತನಾಡಿದರು. ಬಂಟ್ವಾಳ ಸಂಚಾರ ಠಾಣಾ ಪಿಎಸ್ಐ ರಾಜೇಶ್ ಕೆ.ವಿ. ಅವರು ರಸ್ತೆ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಎಂ.ಎಸ್.ಅವರು ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಪ್ರೊಬೆಷನರಿ ಪಿಎಸ್ಐ ರಾಮಕೃಷ್ಣ ಸ್ವಾಗತಿಸಿದರು. ಪೊಲೀಸ್ ಕಾನ್ಸ್‌ಟೇಬಲ್ ವಿವೇಕ್ ಕಾರ್ಯಕ್ರಮ ನಿರ್ವಹಿಸಿದರು.