ಬಂಟ್ವಾಳ: ಬಿ.ಸಿ.ರೋಡಿನಿಂದ ದ.ಕ.ಜಿಲ್ಲಾಕಾರಿ ಕಚೇರಿಗೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಕಾಲ್ನಡಿಗೆ ಜಾಥಾ ಭಾನುವಾರ ಮಧ್ಯಾಹ್ನ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗದಿಂದ ಮಧ್ಯಾಹ್ನ ಆರಂಭಗೊಂಡಿತು.
ಮೂಲಭೂತ ಸೌಕರ್ಯಗಳಲ್ಲಿ ಒಂದಾದ ’ರಸ್ತೆ ಸಂಪರ್ಕವನ್ನು ಪ. ಜಾತಿ | ಪಂಗಡದವರ ಮನೆಗಳಿರುವಲ್ಲಿಗೆ ಒದಗಿಸುವಂತೆ ಮತ್ತು ಇತರ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಈ ಪ್ರತಿಭಟನೆ ನಡೆಯುತ್ತಿದ್ದು, ಜಾಥಾ ಮಾಡುವುದಾಗಿ ಹೇಳಿದರೂ ಅಧಿಕಾರಿ ವರ್ಗವಾಗಲೀ, ಜನಪ್ರತಿನಿಧಿಗಳಾಗಲೀ ಸ್ಪಂದಿಸುತ್ತಿಲ್ಲ, ಹೀಗಾಗಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲಿದ್ದೇವೆ ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಎಚ್ಚರಿಸಿದರು.
ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಸಭಾ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಲಾಗುವುದು, ಅಲ್ಲದೆ ರಸ್ತೆ ವಂಚಿತರು ಮುಂದಕ್ಕೆ ಯಾವುದೇ ಕಾರಣಕ್ಕೂ ಆಯಾಯ ಗ್ರಾಮ ಪಂಚಾಯತ್ಗಳಿಗೆ ಮನೆ ತೆರಿಗೆ ಕಟ್ಟದಿರಲು ಕೂಡಾ ನಿರ್ಧರಿಸಲಾಗುವುದು. ಜಿಲ್ಲಾಕಾರಿಗಳು ವಿಶೇಷವಾಗಿ ಕ್ರಮವಹಿಸುವ ಕಡತಗಳಿಗೆ ನ್ಯಾಯ ಒದಗಿಸಿ, ತಮ್ಮ ವ್ಯಾಪ್ತಿಗೆ ಬರದಿರುವ ಬೇಡಿಕೆಗಳನ್ನು ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದವರು ಹೇಳಿದರು. ಜಾಥಾದಲ್ಲಿ ಮುಖಂಡರಾದ ಗೋಪಾಲ ನೇರಳಕಟ್ಟೆ, ನಾಗೇಶ್ ಮಂಜನಾಡಿ, ಶ್ರೀಧರ ಮಂಜನಾಡಿ, ಸಂಜೀವ ಹೆಗ್ಡೆಕೋಡಿ, ಜಗದೀಶ್ ಮಂಜನಾಡಿ ಮತ್ತಿತರರು ಇದ್ದರು.