ಕವರ್ ಸ್ಟೋರಿ

ಪ್ರತಿದಿನವೂ ಸಮಸ್ಯೆ.. ಇದು ಬಿ.ಸಿ.ರೋಡ್ ನಲ್ಲಿ ಬಸ್ ಗಾಗಿ ಕಾಯುವವರ ‘ಬಯಲು’ ತಂಗುದಾಣದ ಕಥೆ, ವ್ಯಥೆ

EDITED AND OWNED BY – HARISH MAMBADY. For Advertisements, News Contact Watsapp No: 9448548127
ಬಿ.ಸಿ.ರೋಡ್ ಸರ್ವೀಸ್ ರಸ್ತೆಯೇ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುವ ಜಾಗ. ಮಳೆ ಬಂದರಂತೂ ಇಲ್ಲಿ ಪರಿಸ್ಥಿತಿ ಅನುಭವಿಸಿದವರಿಗಷ್ಟೇ ಗೊತ್ತು!!
ಬಿ.ಸಿ.ರೋಡಿನ OPEN BUS WAITING STAND!!.. ಎಷ್ಟೇ ಸುಧಾರಣೆಯಾದರೂ ಪುತ್ತೂರು, ಧರ್ಮಸ್ಥಳ, ಬೆಂಗಳೂರು, ಮೈಸೂರಿಗೆ ತೆರಳುವವರು ಇಲ್ಲಿ ನಿಲ್ಲುವುದು ತಪ್ಪಿಲ್ಲ. ಇಲ್ಲೊಂದು ಸೂರೂ ಇಲ್ಲ. ಬಸ್ ಗಳು ಬರುವಾಗ ಕಾಣಿಸುವುದೂ ಇಲ್ಲ. ಬಲವುಳ್ಳವನಷ್ಟೇ ಬಸ್ ಹತ್ತಬಹುದು. ಅದರಲ್ಲೂ ಎತ್ತರ ತಗ್ಗು ಇರುವ ವಿಚಿತ್ರ ಜಾಗವಿದು. ವೃದ್ಧರು, ಮಕ್ಕಳಿಗೆ ಬಸ್ ಹತ್ತುವುದೇ ಸವಾಲು

ಪ್ರತಿದಿನವೂ ಸಮಸ್ಯೆ.. ಇದು ಬಿ.ಸಿ.ರೋಡ್ ನಲ್ಲಿ ಬಸ್ ಗಾಗಿ ಕಾಯುವವರ ‘ಬಯಲು’ ತಂಗುದಾಣದ ಕಥೆ, ವ್ಯಥೆ

—-ಹರೀಶ ಮಾಂಬಾಡಿ, ಬಂಟ್ವಾಳನ್ಯೂಸ್

ಸದಾ ಬ್ಯುಸಿ ಇರುವ ಬಿ.ಸಿ.ರೋಡ್ ನಲ್ಲಿ ಇನ್ನೂ ಕಾರ್ಯಾಚರಿಸುತ್ತಿದೆ ಬಯಲು ಬಸ್ ಕಾಯುವ ಪ್ರಯಾಣಿಕರ ತಂಗುದಾಣ!!!…OPEN BUS WAITING STAND..

ನೆನಪಿದೆಯೇ…1980ರಿಂದ 2000ರ ಅವಧಿಯಲ್ಲಿ ಬಿ.ಸಿ.ರೋಡಿನಿಂದ ಮಂಗಳೂರಿಗೆ ಶಾಲೆ, ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಬೆಳಗ್ಗೆ 7.30ರಿಂದ 9ರ ಅವಧಿಯಲ್ಲಿ ಮಂಗಳೂರಿಗೆ ಮೂರೇ ಎಕ್ಸ್ ಪ್ರೆಸ್ ಬಸ್..ಬಂದರೆ ಅದು ನಿಲ್ಲುವುದು ಈಗಿನ ಫ್ಲೈಓವರ್ ಇರುವ ಜಾಗದ ಆರಂಭದಲ್ಲಿ.. ಇಲ್ಲದಿದ್ದರೆ, ಹಳೇ ತಾಪಂ ಕಟ್ಟಡದ ಮುಂಭಾಗ ರಶ್ ಇದ್ದರೆ…ಚಿತ್ರಾ ಸ್ಟುಡಿಯೋ ಮೊದಲಿದ್ದ ಜಾಗದ ಸರಿಯಾಗಿ ಎದುರು.. ಅಂದರೆ, ಈಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಟ್ಟಿದ ಜಾಗದ ಪಕ್ಕ!!!..ಬಸ್ ಗಾಗಿ ಕಾಯುವವರು ಓಡಿಕೊಂಡು ಹೋಗಿ ಬಸ್ ಹತ್ತಬೇಕು. ಡ್ರೈವರ್ ನ ಮೂಡ್ ನೋಡಿ ಬಸ್ ನಿಲ್ಲುತ್ತದೆಯೋ ಇಲ್ಲವೋ ಎಂದು ಗಮನಿಸಬೇಕು.. ಕೆಲವೊಂದು ಬಾರಿ ಮಂಗಳೂರಿಗೆ ಹೋಗುವ ಟ್ಯಾಕ್ಸಿಗಳಲ್ಲಿ ಒತ್ತೊತ್ತಾಗಿ ಕುಳಿತು ಹೋಗುವ ಪರಿಸ್ಥಿತಿ..!! ಆ ಅವಧಿಯಲ್ಲಿ ಮಂಗಳೂರಿಗೆ ದಿನಾ ತೆರಳುತ್ತಿದ್ದವರು, ”ನಮ್ಮ ಮಕ್ಕಳ ಕಾಲಕ್ಕಾದರೂ ಇಂಥ ಪರಿಸ್ಥಿತಿಗೆ ಕಡಿವಾಣ ಬೀಳಬಹುದು” ಎಂದು ಮನಸ್ಸಲ್ಲೇ ಹಾರೈಸುತ್ತಿದ್ದರೋ ಏನೋ..ವರ್ಷಗಳು ಉರುಳಿದವು. ಬಸ್ಸುಗಳ ಸಂಖ್ಯೆ ಜಾಸ್ತಿ ಆಯಿತು. ಆದರೆ ಇವತ್ತಿಗೂ ಬೇಕಾದರೆ ನೀವು ಬಿ.ಸಿ.ರೋಡಿಗೆ ಬೆಳಗ್ಗೆ 7.30ರಿಂದ 9.30ರ ಅವಧಿಯಲ್ಲಿ ಬಸ್ಸುಗಳನ್ನು ಹಿಡಿಯಲು ಹಿಂದಿನಂತೆ ಓಡಬೇಕೆಂದಿಲ್ಲ ಎನ್ನುವುದು ಒಂದನ್ನು ಬಿಟ್ಟರೆ, ಪ್ರಯಾಣಿಕರಿಗೆ ನಿಲ್ಲಲು ಇನ್ನೂ ಬಯಲೇ ಗತಿ!!!

ಹಾಗಾದರೆ ನಂತರ ಏನಾಯಿತು? ಬಿ.ಸಿ.ರೋಡಿನಲ್ಲಿ ಇಪ್ಪತ್ತು, ಮೂವತ್ತು ವರ್ಷಗಳಲ್ಲಿ ಭವ್ಯ ಕಟ್ಟಡಗಳು ತಲೆ ಎತ್ತಿದವು. ಆ ಕಟ್ಟಡಗಳ ತಳ ಅಂತಸ್ತು ಸಮೇತ ಎಲ್ಲ ಕಡೆಯೂ ಮಳಿಗೆಗಳು ಕಾರ್ಯಾಚರಿಸಲಾರಂಭಿಸಿದವು. ಜನಸಂಖ್ಯೆ ಹೆಚ್ಚಾದಂತೆ ವಾಹನಗಳು ಹೆಚ್ಚಾಗತೊಡಗಿದವು. ಬಿ.ಸಿ.ರೋಡ್ ನಲ್ಲಿ ವಾಹನ ನಿಲುಗಡೆಗೆ ಜಾಗವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿತು. ಈಗ ಪಾರ್ಕಿಂಗ್ ಗೆಂದು ಜಾಗ ತೋರಿಸಿ ಎಂದು ದೂರು ಕೊಟ್ಟವರಿಗೇ ಮಾರುತ್ತರ ನೀಡುವವರು ಹೆಚ್ಚಾಗಿದ್ದಾರೆ!!..ಬಿ.ಸಿ.ರೋಡ್ ಅತ್ಯಂತ ಬ್ಯುಸಿ ಪೇಟೆಯಾಗಿ ಮಾರ್ಪಾಟಾಗಿದೆ. ನೆಲ ಅಂತಸ್ತಿನಲ್ಲಿ ಪಾರ್ಕಿಂಗ್ ಇಲ್ಲದ ಭವ್ಯ ಸೌಧಗಳ ಮುಂಭಾಗ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂಥದ್ದೇ ಸಮಸ್ಯೆ ಬಸ್ ಪ್ರಯಾಣಿಕರದ್ದು.

ಬಸ್ ಪ್ರಯಾಣಿಕರು ಈಗ ಎಲ್ಲಿ ನಿಲ್ಲುತ್ತಾರೆ? ಇಡೀ ಬಿ.ಸಿ.ರೋಡಿನಲ್ಲಿ ಬಸ್ ಪ್ರಯಾಣಿಕರು ನಿಲ್ಲುವ ಜಾಗಗಳು ಇವು. ಮೊದಲನೆಯದ್ದು ಪುರಸಭೆ ನಿರ್ಮಿಸಿದ ಖಾಸಗಿ ಬಸ್ ಪ್ರಯಾಣಿಕರ ತಂಗುದಾಣ ಎಂದು ಹೇಳಲಾಗುವ ವಾಣಿಜ್ಯ ಕಟ್ಟಡ. ಯಾರಾದರೂ ಬಿ.ಸಿ.ರೋಡಿನಲ್ಲಿ ಈ ಲೇಖನವನ್ನು ಓದುತ್ತಿರುವವರು ಒಮ್ಮೆ ಈ ಕಟ್ಟಡಕ್ಕೆ ತೆರಳಿ ಕಣ್ಣಾಡಿಸಿದರೆ, ಇದರ ನೈಜಚಿತ್ರಣ ದೊರಕುತ್ತದೆ. ಇದರ ಒಪ್ಪ ಓರಣಗಳ ಕುರಿತು ಬರೆಯುವ ಬದಲು ನೀವು ನೋಡಿಯೇ ಧನ್ಯರಾಗಬೇಕು. ಇಂಥ ಕಟ್ಟಡದ ಮುಂಭಾಗ ಬಿ.ಸಿ.ರೋಡಿನಿಂದ ಹಳ್ಳಿ ಪ್ರದೇಶಗಳು, ಮೂಡುಬಿದಿರೆ, ಮುಡಿಪು ಕಡೆ ತೆರಳುವ ಖಾಸಗಿ ಬಸ್ ಗಳು ನಿಲ್ಲುತ್ತವೆ. ಪ್ರಯಾಣಿಕರಿಗೆ ಸ್ವಲ್ಪ ತಲೆ ಮೇಲೆ ಸೂರಿದೆ ಎಂದು ಹೇಳಲಾಗುವ ನಿಲ್ದಾಣ ಇದು ಎನ್ನಬಹುದು. ಎರಡನೆಯದ್ದು,, 2017ರಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಯಾದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ. ಇಲ್ಲಿ ಮಂಗಳೂರಿಗೆ ತೆರಳುವ ಪ್ರಯಾಣಿಕರಲ್ಲಿ ಕೆಲವರು ಬಂದು ನಿಲ್ಲುತ್ತಾರೆಯೇ ವಿನಃ ಗಿಜಿಗುಟ್ಟುವ ಜನರು ಇಲ್ಲಿ ಕಾಣಿಸಲು ಆರಂಭಿಸಿಲ್ಲ. ಇನ್ನೂ ಜನರಿಗೆ ಇಲ್ಲೊಂದು ನಿಲ್ದಾಣ ಇರುವುದು ಅಪರಿಚಿತವಾಗಿಯೇ ಇದೆ. ಮೂರನೆಯದ್ದು, ಬಿ.ಸಿ.ರೋಡಿನ ಪುರಸಭೆ ನಿರ್ಮಿಸಿದ ಬಸ್ ನಿಲ್ದಾಣ (ವಾಣಿಜ್ಯ ಸಂಕೀರ್ಣ)ದ ಎದುರು ಇರುವ SLOPE (ಎತ್ತರ, ತಗ್ಗು ಸಂಧಿಸುವ ಜಾಗ) ಪ್ರದೇಶ. ಇಲ್ಲಿ ಬಿಸಿಲು, ಮಳೆ, ಚಳಿ ಎನ್ನದೆ ಪ್ರಯಾಣಿಕರು ನಿಲ್ಲುತ್ತಾರೆ. ಧರ್ಮಸ್ಥಳ, ಪುತ್ತೂರು, ವಿಟ್ಲ ಸಹಿತ ದೂರದೂರುಗಳಾದ ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಪ್ರದೇಶಗಳಿಗೆ ತೆರಳುವ ಬಸ್ಸುಗಳು ಇಲ್ಲೇ ಹೆದ್ದಾರಿಯಲ್ಲಿ ನಿಲ್ಲುತ್ತವೆ. ಪ್ರಯಾಣಿಕ ಈ ಬಸ್ಸುಗಳನ್ನು ನೋಡಬೇಕಾದರೆ, ಆಗಾಗ ಅತ್ತಿಂದಿತ್ತ ಸಂಚರಿಸಬೇಕು. ಕೆಲವೊಮ್ಮೆ ಶರವೇಗದಲ್ಲಿ ಬಸ್ ಬಂದು ‘ಬೇಗ, ಬೇಗ’ ಎಂದು ಗಡಿಬಿಡಿ ಮಾಡಿ, ಪ್ರಯಾಣಿಕರನ್ನು ಹತ್ತಿಸುವ ಧಾವಂತದಲ್ಲಿ ಬಸ್ಸುಗಳು ತಪ್ಪಿ ಹೋಗುವುದೂ ಉಂಟು.. ಅತ್ಯಂತ ಅಸಹನೀಯವಾದ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಇಲ್ಲಿ ನಿಲ್ಲುತ್ತಾರೆ. ಕೆಲವರು ‘ಬಸ್ ಗೆ ಕಾಯಬೇಕಾಗಿಲ್ಲ, ಬಸ್ಸುಗಳು ಜಾಸ್ತಿ ಉಂಟಲ್ಲ’, ತೊಂದರೆ ಏನಿಲ್ಲ ಎನ್ನುವವರ ಮಧ್ಯೆ ಮೌನವಾಗಿ ಪ್ರಯಾಣಿಕರು ಇಲ್ಲಿ ಬಸ್ ಗಾಗಿ ಕಾಯಬೇಕಾಗುತ್ತದೆ.. ಇನ್ನು ಕೊನೆಯ ಜಾಗವೆಂದರೆ ಅದು ಮಂಗಳೂರಿಗೆ ಪ್ರಯಾಣಿಸುವವರು ನಿಲ್ಲುವ ಚರಂಡಿಯಂಥ ಜಾಗ… ಹೌದು. 1985, 90ರ ದಶಕದ ಬಳಿಕ ಇತ್ತೀಚಿನ ಹತ್ತು ವರ್ಷಗಳ ಅವಧಿಯಲ್ಲಿ ಬದಲಾವಣೆ ಆದದ್ದೆಂದರೆ ಫ್ಲೈಓವರ್ ಮಾತ್ರ…ಉಳಿದಂತೆ ಮಂಗಳೂರಿಗೆ ತೆರಳುವ ಬಸ್ ಗಾಗಿ ಸರ್ವೀಸ್ ರಸ್ತೆಯಲ್ಲಿ ನಿಲ್ಲಬೇಕು.. ಪೀಕ್ ಅವರ್ ಎನ್ನುವ ಹೊತ್ತಾದ ಬೆಳಗಿನ ಅವಧಿಯಲ್ಲಿ ನಿಲ್ಲುವುದೆಂದರೆ… ಅದು ನಿಂತವರಿಗಷ್ಟೇ ಗೊತ್ತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ