ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಆಶ್ರಯದಲ್ಲಿ ನಮ್ಮ ನಡಿಗೆ ನರಹರಿಯ ಕಡೆಗೆ ಪಾದಯಾತ್ರೆ ಮತ್ತು ಜನಜಾಗೃತಿ ಸಾರ್ವಜನಿಕ ಸಭೆ ಭಾನುವಾರ ಬೆಳಗ್ಗೆ ನಡೆಯಿತು.,
ಕಲ್ಲಡ್ಕ ಶ್ರೀರಾಮ ಮಂದಿರದ ಬಳಿಯಿಂದ ಮತ್ತು ಮೆಲ್ಕಾರ್ ಜಂಕ್ಷನ್ ನಿಂದ ಪಾದಯಾತ್ರೆ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು, ದಿಕ್ಸೂಚಿ ಭಾಷಣವನ್ನು ಬಾಲವಾಗ್ಮಿ ಹಾರಿಕಾ ಮಂಜುನಾಥ್ ಮಾಡಿದರು.ಪೂರ್ವಜರು ನಮಗೆ ಬಿಟ್ಟುಹೋದ ಆಸ್ತಿಯನ್ನು ರಕ್ಷಿಸುವ ಕೆಲಸವನ್ನು ನಾವು ಮಾಡಬೇಕು, ಈ ಕುರಿತು ನಾವು ಜಾಗೃತರಾಗಬೇಕು ಎಂದರು. ಅಪಘಾನಿಸ್ಥಾನದಲ್ಲಿ ಆದ ಘಟನೆಗಳು ಇಲ್ಲಿ ಆಗಬಾರದು ಎಂಬುದಾದರೆ, ನಾವು ಜಾಗೃತರಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಢ್ಯಂತಾಯ, ಕ್ಷೇತ್ರಗಳು ಒಳ್ಳೆಯದಾಗಬೇಕು, ಭಕ್ತರಿಗೆ ಉತ್ತಮ ವ್ಯವಸ್ಥೆಗಳು ಕಲ್ಪಿಸಬೇಕು ಆದರೆ ಪ್ರವಾಸೋದ್ಯಮ ಹೆಸರಲ್ಲಿ ಪಾವಿತ್ರ್ಯತೆ ಹಾಳಾಗುವುದನ್ನು ನಾವು ಸಹಿಸುವುದಿಲ್ಲ ಎಂದರು.
ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಮಾತನಾಡಿ, ನರಹರಿ ಪರ್ವತ ನಮಗೆಲ್ಲರಿಗೂ ಶ್ರದ್ಧಾಕೇಂದ್ರ, ಇದರ ಪಾವಿತ್ರ್ಯ ಉಳಿಸಲು ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ಕಟಿಬದ್ಧವಾಗಿದೆ ಎಂದರು.
ಸಭಾಧ್ಯಕ್ಷತೆಯನ್ನು ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ ನೆತ್ತರಕೆರೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ತಾಲೂಕು ಅಧ್ಯಕ್ಷ ಗಣೇಶ್ ಕುಲಾಲ್ ಕೆದಿಲ ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಅರುಣ್ ಸಜಿಪ ಸ್ವಾಗತಿಸಿದರು. ವೈಯಕ್ತಿಕ ಗೀತೆ, ವಂದೇ ಮಾತರಂ ಅನ್ನು ವಿದ್ಯಾಶ್ರೀ ಕಲ್ಲಡ್ಕ ಹಾಡಿದರು. ಕಲ್ಲಡ್ಕ ಮತ್ತು ಮೇಲ್ಕಾರ್ ನಿಂದ ನಡೆದ ಮೆರವಣಿಗೆಯಲ್ಲಿ ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಪ್ರಮುಖರಾದ ದಿನೇಶ್ ಅಮ್ಟೂರು, ಪುರುಷೋತ್ತಮ ಸಾಲಿಯಾನ್, ಪಿ.ಎಸ್.ಮೋಹನ್, ರವೀಶ್ ಶೆಟ್ಟಿ, ದಯಾನಂದ ಉಜಿರೆಮಾರು, ತಾಲೂಕು ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.