ವಿಟ್ಲ: ಇತ್ತೀಚೆಗೆ ನಿಧನರಾದ ತೆಂಕುತಿಟ್ಟಿನ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರಿಗೆ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರದ್ಧಾಂಜಲಿ ಸಭೆ, ನುಡಿನಮನ ಸಲ್ಲಿಸಲಾಯಿತು. ಯಕ್ಷಗಾನ ಕಲಾಪೋಷಕ, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಟಿ. ಶ್ಯಾಮ ಭಟ್ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಪದ್ಯಾಣ ಗಣಪತಿ ಭಟ್ಟರ ಕೊಡುಗೆ ಅನನ್ಯವಾದುದು. ಅವರು ಯಕ್ಷಗಾನದಲ್ಲಿ ಪದ್ಯಾಣ ಶೈಲಿಯನ್ನು ಹುಟ್ಟುಹಾಕಿ ಯಕ್ಷಗಾನದ ಕೀರ್ತಿಯನ್ನು ಬೆಳಗಿಸಿದವರು. ಅವರು ಸರಳತೆಯೊಂದಿಗೆ ಹಿರಿಕಿರಿಯ ಕಲಾವಿದರೊಂದಿಗೆ, ಅಭಿಮಾನಿಗಳೊಂದಿಗೆ ಆತ್ಮೀಯತೆಯಿಂದ ಬೆರೆತವರು ಎಂದರು. ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ ನುಡಿನಮನ ಸಲ್ಲಿಸಿ ಮಾತನಾಡಿ, ಶೇಣಿ ಗೋಪಾಲಕೃಷ್ಣ ಭಟ್ಟರಂತಹ ಹಿರಿಯ ಕಲಾವಿದರ ಮೆಚ್ಚುಗೆಗೆ ಪಾತ್ರರಾದವರು ಪದ್ಯಾಣ ಗಣಪತಿ ಭಟ್ಟರು. ಅವರು ಯಾವುದೇ ಯಕ್ಷಗಾನ ಪ್ರಸಂಗವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು ಎಂದರು. ಖ್ಯಾತ ಗಮಕಿ ಗಣಪತಿ ಪದ್ಯಾಣ ಮಾತನಾಡಿ, ಪದ್ಯಾಣ ಗಣಪತಿ ಭಟ್ಟರೊಂದಿಗಿನ ಬಾಲ್ಯದ ಒಡನಾಟವನ್ನು ಮೆಲುಕು ಹಾಕಿದರು. ಪದ್ಯಾಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸತ್ಯನಾರಾಯಣ ಭಟ್ ಸೇರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ, ಸುಬ್ರಹ್ಮಣ್ಯ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಅಭಿಮಾನಿಗಳು ಪದ್ಯಾಣ ಗಣಪತಿ ಭಟ್ಟರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.