ವಿಟ್ಲ: ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಮತ್ತು ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ಕಳೆದ ಒಂದು ವರ್ಷದಿಂದ ಡಾ.ಮಹೇಶ್ ಪದ್ಯಾಣ ಅವರು ಉಚಿತವಾಗಿ ಸಂಗೀತ ಪಾಠಗಳನ್ನು ಆಸಕ್ತರಿಗೆ ಹೇಳಿಕೊಡುವ ಮೂಲಕ ಜ್ಞಾನಪ್ರಸಾರ ಮಾಡುತ್ತಿದ್ದು, ಇದರ ಪ್ರಥಮ ವಾರ್ಷಿಕೋತ್ಸವವು ವಿಜಯದಶಮಿಯಂದು ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಪದ್ಯಾಣ ಸಂಗೀತವಾಹಿನಿ ಮೂಲಕ ನಡೆದ ಈ ಕಾರ್ಯಕ್ರಮವನ್ನು ಪದ್ಯಾಣ ಗೋವಿಂದ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ. ಮಹೇಶ ಪದ್ಯಾಣ ಅವರು ಕಳೆದ ಒಂದು ವರ್ಷದಿಂದ 25 ಕ್ಕೂ ಹೆಚ್ಚು ಸಂಗೀತಾಸಕ್ತರಿಗೆ ಪದ್ಯಾಣದಲ್ಲಿ ಹಾಗೂ ಕಲ್ಲಡ್ಕದಲ್ಲಿ ಉಚಿತವಾಗಿ ಸಂಗೀತ ತರಗತಿಯನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಜಯದಶಮಿಯಂದು ಪದ್ಯಾಣದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಸಂಗೀತ ವಿದ್ಯಾರ್ಥಿಗಳಿಗೆ ವಿದ್ಯಾರಂಭ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಿತು. ಬಳಿಕ ಸಂಗೀತವಾಹಿನಿಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್ ಶುಭ ಹಾರೈಸಿ, ವಂದನಾರ್ಪಣೆ ಮಾಡಿದರು. ಸಾವಿತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.