ಮರೆಯಾದ ತೆಂಕುತಿಟ್ಟಿನ ಗಾನಗಂಧರ್ವ, ಎಸ್ಪಿಬಿ ಅವರಿಂದಲೇ ಪ್ರಶಂಸೆಗೊಳಗಾಗಿದ್ದ ಯಕ್ಷಗಾನದ ಪ್ರತಿಭೆ
ಪುತ್ತೂರು: ತೆಂಕುತಿಟ್ಟಿನ ಹಿರಿಯ ಭಾಗವತರಾದ ಪದ್ಯಾಣ ಗಣಪತಿ ಭಟ್ (67) ಇನ್ನಿಲ್ಲ. ಕಲ್ಮಡ್ಕದಲ್ಲಿರುವ ಸ್ವಗೃಹದಲ್ಲಿ ಮಂಗಳವಾರ ಬೆಳಗ್ಗೆ 7.45ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಗೋಳ್ತಾಜೆಯಲ್ಲಿ 1955 ಜ.21ರಂದು ಪದ್ಯಾಣ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ ಜನಿಸಿದ ಅವರು ಮೂಲತಃ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಕುಟಂಬದವರು. ಬಾಲ್ಯದಲ್ಲೇ ಯಕ್ಷಗಾನದತ್ತ ಆಸಕ್ತರಾಗಿದ್ದ ಅವರು ಧರ್ಮಸ್ಥಳದಲ್ಲಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಗುರು ಮಾಂಬಾಡಿ ನಾರಾಯಣ ಭಾಗವತರ ಬಳಿ ಭಾಗವತಿಕೆ ಅಭ್ಯಾಸ ಮಾಡಿದ ಬಳಿಕ ಸುಮಾರು 35 ವರ್ಷಕ್ಕೂ ಅಧಿಕ ಕಾಲ ವಿವಿಧ ಯಕ್ಷಗಾನ ಮೇಳಗಳಾದ ಸುರತ್ಕಲ್, ಕರ್ನಾಟಕ, ಮಂಗಳಾದೇವಿ, ಎಡನೀರು ಮೇಳಗಳಲ್ಲಿ ವ್ಯವಸಾಯ ಮಾಡಿದರು ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಬಹುಬೇಡಿಕೆಯ ಕಲಾವಿದರಾಗಿದ್ದರು.. ಸುರತ್ಕಲ್ ಮೇಳದಲ್ಲಿದ್ದಾಗ ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ ಮೊದಲಾದ ಪ್ರಸಂಗಗಳು ಜನಪ್ರಿಯವಾಗಿದ್ದವು. ಸುರತ್ಕಲ್ ಮೇಳವೊಂದರಲ್ಲೇ ಅವರು ಸುಮಾರು 25ಕ್ಕೂ ಅಧಿಕ ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ. . ದೇಶ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಹರಡಿಸಿದ್ದ ಪದ್ಯಾಣ, ಈಟಿವಿಯ ಎದೆತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಅವರ ಹಾಡುಗಾರಿಕೆಯನ್ನು ಸ್ವತಃ ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರಶಂಸಿಸಿದ್ದರು. ಕನ್ನಡ, ತುಳು ಯಕ್ಷಗಾನದ ಧ್ವನಿಸುರುಳಿಗಳಲ್ಲಿ ಪದ್ಯಾಣ ಕಂಠ ಜನಪ್ರಿಯವಾಗಿದ್ದವು. ಅವರಿಗೆ ಹಲವು ಪ್ರಶಸ್ತಿ ಸನ್ಮಾನಗಳು ಸಂದಿವೆ. ಅವರ 60ನೇ ವಯಸ್ಸಿನಲ್ಲಿ ಮಂಗಳೂರಿನ ಪುರಭವನದಲ್ಲಿ ಅಭಿಮಾನಿಗಳು ಇಡೀ ದಿನ ಪದಯಾನ ಹೆಸರಿನಲ್ಲಿ ಕಾರ್ಯಕ್ರಮವನ್ನು ನಡೆಸಿದ್ದರು.