ಬಂಟ್ವಾಳ: ಕಳೆದ ಕೆಲ ದಿನಗಳಿಂದ ತಾಲೂಕಿನ ವಿವಿಧೆಡೆ ಉಂಟಾದ ಮಳೆ ಹಾನಿ ಕುರಿತು ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ನಿಯೋಗದೊಂದಿಗೆ ತೆರಳಿ ವಿಶೇಷ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಕಾವಳಮುಡೂರು ಮತ್ತಿತರ ಪ್ರದೇಶಗಳಲ್ಲಿ ಮಳೆ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅವರು ಸಂತ್ರಸ್ತರಿಗೆ ಈ ಆಶ್ವಾಸನೆಯನ್ನು ನೀಡಿದರು.
ತಾಲೂಕಿನಲ್ಲಿ ಹಾನಿಯಾದ ಕೃಷಿಯ ಬಗ್ಗೆ ಹಾಗೂ ನಷ್ಟದ ಅಂದಾಜುಪಟ್ಟಿಯನ್ನು ಶೀಘ್ರವಾಗಿ ತಯಾರಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ ಅವರು, ತಾಲೂಕಿನಲ್ಲಿ ಸುಮಾರು 30 ಸಾವಿರಕ್ಕೂ ಮಿಕ್ಕಿ ಫಲನೀಡುವ ಅಡಿಕೆ ಮರ , ಸಾವಿರಾರು ತೆಂಗಿನ ಮರ, ಲಕ್ಷಾಂತರ ರೂ ಬೆಲೆ ಬಾಳುವ ವಿವಿಧ ಜಾತಿಯ ಮರಗಳು, 100 ಕ್ಕೂ ಅಧಿಕ ವಾಸದ ಮನೆಗಳಿಗೆ ಸುಂಟರಗಾಳಿಯಿಂದ ಹಾನಿಯಾಗಿರುವ ಬಗ್ಗೆ ಅಧಿಕಾರಿ ಗಳು ಮಾಹಿತಿ ನೀಡಿದ್ದಾರೆ.ಜೊತೆಗೆ ಮೆಸ್ಕಾಂ ಇಲಾಖೆಗೂ ನಷ್ಟವುಂಟಾಗಿದೆ ಎದರು. ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು, ಬಿಜೆಪಿ ಪಕ್ಷದ ಪ್ರಮುಖರು, ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.