ಬಂಟ್ವಾಳ ಬಂಟರ ಭವನದಲ್ಲಿ ಅಂತ್ಯೋದಯ – ಇಲಾಖೆಗಳ ವಿವಿಧ ಯೋಜನೆ ಮಾಹಿತಿ ಕಾರ್ಯಾಗಾರ
ಬಂಟ್ವಾಳ: ಸಮಾಜ ಕಲ್ಯಾಣ ಇಲಾಖೆ ಇಡೀ ಸಮಾಜದ ಕಸ್ಟೋಡಿಯನ್ (ಉಸ್ತುವಾರಿ) ಆಗಿ ಕಾರ್ಯನಿರ್ವಹಿಸಬೇಕು, ಅಂತ್ಯೋದಯ ಕಾರ್ಯಕ್ರಮ ಅನುಷ್ಠಾನ ಉತ್ಸವ ಹಬ್ಬವಾಗಿ ಮಾರ್ಪಾಡಾಗಲಿ, ಪ್ರತಿ ಜಿಲ್ಲೆಯಲ್ಲೂ ಜಾಗೃತಿ ಸಮಿತಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಸೋಮವಾರ (ಅ.4ರಂದು) ಬೆಳಗ್ಗೆ ಬಂಟ್ವಾಳದ ಬಂಟರ ಭವನದಲ್ಲಿ ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಅಂತ್ಯೋದಯ ಎಂಬ ಹೆಸರಿನ ಇಲಾಖೆಗಳ ವಿವಿಧ ಯೋಜನೆಗಳ ರಾಜ್ಯಮಟ್ಟದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸರ್ಕಾರದ ಸೌಲಭ್ಯಗಳನ್ನು ತಲುಪಿಸಿ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನದಿಂದ ಬದುಕಬೇಕು ಎಂಬುದು ಅಂತ್ಯೋದಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾದಂಥ ಕಾರ್ಯಕ್ರಮಗಳ ಸಹಿತ ವಿವಿಧ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯ ಗ್ರಾಮಮಟ್ಟದಲ್ಲಿ ಆಗಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ಸಮಿತಿ ಕಡ್ಡಾಯವಾಗಿ ಜಾರಿಯಾಗಬೇಕು, ಇಂದು ಯುವಕರು ಸಾಮಾಜಿಕ ಜಾಲತಾಣಗಳ ಸದುಪಯೋಗವನ್ನು ಮಾಡಿಕೊಳ್ಳಬೇಕಾಗಿದ್ದು, ಇಲಾಖೆಯ ವಿಚಾರಗಳನ್ನು ಗಮನಿಸಿ, ಸೌಲಭ್ಯಗಳನ್ನು ಜನರಿಗೆ ಪ್ರಸಾರ ಮಾಡುವ ಕೆಲಸ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಆಶಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗ್ರಾಮ ಪಂಚಾಯತ್‍ನ್ನು ಕೇಂದ್ರವಾಗಿಟ್ಟುಕೊಂಡು ಯಾರೇ ಫಲಾನುಭವಿಗಳು ನೇರವಾಗಿ ಗ್ರಾಮ ಪಂಚಾಯತ್‍ಗೆ ಬಂದು ಈ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ದಿನ ದಿನಗಳಲ್ಲಿ ಇಲಾಖೆಯ ಎಲ್ಲಾ ಕಾರ್ಯಕ್ರಮಗಳು ಕೂಡಾ ಗ್ರಾಮ ಪಂಚಾಯತ್‍ಗಳ ಮೂಲಕ ಹಾಗೂ ತಾಲೂಕು ಅಧಿಕಾರಿಗಳ ಮೂಲಕ ಮಾಡಲಾಗುತ್ತದೆ. ಈ ಯೋಜನೆ ಕಾರ್ಯಗತಗೊಳಿಸಬೇಕಾದರೆ ಸ್ಥಳೀಯ ಜನಪ್ರತಿನಿದಿಗಳು ಸಕ್ರೀಯವಾಗಿ ಸಹಕಾರ ನೀಡಬೇಕು. ಆ ಕಾರಣಕ್ಕೆ ಜನಪ್ರತಿನಿಧಿಗಳೊಂದಿಗೆ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ 26 ಸಾವಿರ ಕೋಟಿ ರೂ ಅನುದಾನ ಇದೆ. ರಾಜ್ಯದ ಪರಿಶಿಷ್ಟ ಜಾತಿ ವ್ಯಾಪ್ತಿಯಲ್ಲಿ 1 ಕೋಟಿ 27 ಲಕ್ಷ ಜನರಿದ್ದಾರೆ. 28 ಲಕ್ಷ ಕುಟುಂಬಗಳಿವೆ. 5,500 ಸಾವಿರ ಕುಟುಂಬಗಳಿಗೆ ಸಂಭಾವನೆ ಹಾಗೂ 5,500 ಲಕ್ಷ ಕುಟುಂಬಗಳಿಗೆ ಸ್ವಂತ ಮನೆ ಇಲ್ಲ. 4,500 ಲಕ್ಷ ಕುಟುಂಬಗಳಿಗೆ ನೆಲೆ ಇಲ್ಲ ಮುಂದಿನ ವರ್ಷಗಳಲ್ಲಿ ಇಲಾಖೆ ಇನ್ನಷ್ಟು ಸಕ್ರಿಯವಾಗಿ ಜನರ ನಡುವೆ ಕೆಲಸ ಮಾಡಲಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸುಮಾರು 5.5 ರಿಂದ 6 ವಸತಿ ಶಾಲೆಗಳಿವೆ. ಗಾಂಧೀಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಯವರ ಆಶಯದಂತೆ ಸ್ವಚ್ಚತಾ ಆಂದೋಲನದಲ್ಲಿ 6 ಸಾವಿರಕ್ಕೂ ಅಧಿಕ ಶಾಲೆಗಳು ಏಕಕಾಲದಲ್ಲಿ ಭಾಗಿಯಾಗಿದ್ದರು ಎಂದು ಕೋಟ ಹೇಳಿದರು. ಎಲ್ಲ ಧರ್ಮ, ಜಾತಿಯವರು ಒಗ್ಗಟ್ಟಾದರೆ ಅಂತ್ಯೋದಯ ಪರಿಕಲ್ಪನೆಗೆ ಅರ್ಥ ಬರುತ್ತದೆ. ಅಸ್ಪೃಶ್ಯತೆ ಆಚರಣೆ ನಿವಾರಣೆಗೆ ಕಾರ್ಯಪ್ರವೃತ್ತರಾಗಬೇಕಿದೆ. ಎಲ್ಲಾ ಧರ್ಮವೂ ಒಂದೇ ಎಲ್ಲಾ ಜಾತಿಯರು ಕೂಡಾ ಒಟ್ಟಾಗಿ ಒಂದಾಗಿರಬೇಕು. ಸಮಾಜದ ಸ್ವಾಸ್ಥ್ಯಕ್ಕೆ ನಾವೆಲ್ಲರೂ ಒಟ್ಟಾಗಿ ಒಂದಾಗಿ ಕೆಲಸ ಮಾಡಬೇಕು ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಹಲವು ಬಾರಿ ಯಾವ್ಯಾವ ಜಾತಿಯವರಿಗೆ ಯಾವ ಮೀಸಲಾತಿ ಇದೆ ಎಂಬುದು ಗೊತ್ತಿರುವುದಿಲ್ಲ. ನಿಮ್ಮ ಊರಿನಲ್ಲಿ ಮೀಸಲಾತಿ ಪಟ್ಟಿಯಲ್ಲಿ ಸೇರದ ಅರ್ಹರ ವಿವರಗಳನ್ನು ಆಯೋಗಕ್ಕೆ ನೀಡಿ ಎಂದು ಗ್ರಾಪಂ ಪ್ರತಿನಿಧಿಗಳಿಗೆ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬದುಕುವ ಹಕ್ಕು ಅಂತ್ಯೋದಯ ಎಂಬುದು ದೀನ್ ದಯಾಳ್ ಉಪಾಧ್ಯಾಯ ಪರಿಕಲ್ಪನೆ ಗ್ರಾಮೋತ್ಥಾನದ ಪರಿಕಲ್ಪನೆ ರಾಮರಾಜ್ಯ ನಿರ್ಮಾಣ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಗ್ರಾಪಂ ಪರಿಕಲ್ಪನೆ ಮೂಲಕ ರಾಷ್ಟ್ರೋತ್ಥಾನ ಎಂಬ ಕಲ್ಪನೆಯಡಿ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್, ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನಪರಿಷತ್ತು ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ರವಿಕುಮಾರ್, ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಎಂಎಸ್ ಐಎಲ್ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ತುಂಬೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಬಿ. ತುಂಬೆ, ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಎನ್. ನಾಗಾಂಬಿಕಾದೇವಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ. ರವಿಕುಮಾರ್ ಸುರಪುರ, ದ.ಕ.ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಯೋಗೀಶ್ ಎಸ್.ಜಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಸಮನ್ವಯಾಧಿಕಾರಿ ಡಾ. ಹೇಮಲತಾ ಬಿ.ಎಸ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಇಲಾಖಾ ಸವಲತ್ತುಗಳನ್ನು ವಿವಿಧ ಫಲಾನುಭವಿಗಳಿಗೆ ವಿತರಿಸಲಾಯಿತು.