ಬಂಟ್ವಾಳ: ಶನಿವಾರ ಸಂಜೆ ಬಂಟ್ವಾಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಬಿರುಗಾಳಿ, ಮಳೆಗೆ ಒಟ್ಟು 86 ಮನೆಗಳ ಸಹಿತ ಕೃಷಿ ಭೂಮಿಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಒಟ್ಟು 77 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, 9 ಮನೆಗಳಿಗೆ ತೀವ್ರ ಹಾನಿಯಾಗಿದೆ. ಬಡಗ ಹಾಗೂ ತೆಂಕ ಕಜೆಕಾರು ಪ್ರದೇಶಗಳಲ್ಲಿ 65 ಮನೆಗಳಿಗೆಭಾಗಶಃ ಹಾನಿ, 8 ಮನೆಗಳಿಗೆ ತೀವ್ರ ಹಾನಿಯಾದರೆ, ಉಳಿಯಲ್ಲಿ 1 ಮನೆಗೆ ತೀವ್ರ ಹಾನಿ, 7 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಾವಳಮುಡೂರು ಗ್ರಾಮದಲ್ಲಿ 5 ಮನೆಗಳಿಗೆ ಹಾನಿಯಾಗಿದೆ ಎಂದು ಪ್ರಭಾರ ಕಂದಾಯ ನಿರೀಕ್ಷಕ ಕುಮಾರ್ ಟಿ.ಸಿ. ತಿಳಿಸಿದ್ದಾರೆ. ತಾಲೂಕಿನ ತೆಂಕಕಜೆಕಾರು, ಬಡಗಕಜೆಕಾರು, ಉಳಿ, ಕಾವಳಮುಡೂರು ಸಹಿತ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಬಿರುಗಾಳಿ ಆರ್ಭಟ ತೋರಿತು. ನೂರಾರು ಅಡಕೆ, ತೆಂಗು, ಬಾಳೆ, ರಬ್ಬರ್ ಗಿಡ, ಮರಗಳು ಧರಾಶಾಹಿಯಾಗಿವೆ. ನೆಲ್ಲಿಗುಡ್ಡೆ, ಅಗರ್ತ್ಯಾರು,ಮುಚ್ಚಿರೋಡಿ ಪ್ರದೇಶಗಳಲ್ಲಿ ಕೃಷಿ ಹಾನಿಗಳು ಸಂಭವಿಸಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.