ಪತ್ರಕರ್ತ, ಕವಿ, ಸಾಹಿತಿ ಫಾರೂಕ್ ಗೂಡಿನಬಳಿ ಇನ್ನಿಲ್ಲ. 45 ವರ್ಷದವರಾದ ಅವರು ಕೆಲ ಕಾಲ ಅಸೌಖ್ಯದಿಂದ ಬಳಲುತ್ತಿದ್ದರು. ಇಂದು (ಅಕ್ಟೋಬರ್ 1) ಗೂಡಿನಬಳಿಯಲ್ಲಿರುವ ತನ್ನ ಮನೆಯಲ್ಲಿ ನಿಧನ ಹೊಂದಿದರು. ಅವರು ತಾಯಿ, ಪತ್ನಿ ಮತ್ತು 6 ವರ್ಷದ ಪುಟ್ಟ ಹೆಣ್ಣುಮಗು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸುಮಾರು 17 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಬಂಟ್ವಾಳದ ವರದಿಗಾರರಾಗಿ ಅವರು ಕಾರ್ಯನಿರ್ವಹಿಸಿದ್ದು, ಸಮಾಜಸೇವಾಸಕ್ತ, ಸಂಘಟಕರಾಗಿ, ಶಿಕ್ಷಣ, ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿಯಾಗಿ ದುಡಿದಿದ್ದರು. ಕವಿಯಾಗಿ, ಚುಟುಕು ಸಾಹಿತ್ಯ ರಚನೆಯಲ್ಲಿ ಅವರು ಗಮನ ಸೆಳೆದಿದ್ದು, ಹಲವು ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಗ್ರಾಪಂ.ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಾಗೂ ಮಕ್ಕಳ ಹಕ್ಕಿನ ಬಗ್ಗೆಯು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರಲ್ಲದೆ ಸಾಮಾಜಿಕ ಚಟುವಟಿಕೆಯಲ್ಲಿಯು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಬಂಟ್ವಾಳನ್ಯೂಸ್ ಜಾಲತಾಣದ ಹಿತೈಷಿಯಾಗಿದ್ದ ಅವರ ನಿಧನಕ್ಕೆ ವೆಬ್ ಪತ್ರಿಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದೆ. ಅವರ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.