ಬಂಟ್ವಾಳ: ಮಂಗಳವಾರ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಮತ್ತು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಉಪಸ್ಥಿತಿಯಲ್ಲಿ ನಡೆದ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಚರ್ಚೆಗಳು ನಡೆದವು. ಶುಕ್ರವಾರ ಪೌರಕಾರ್ಮಿಕ ದಿನಾಚರಣೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ಸದಸ್ಯರು ಆರೋಪಿಸಿ, ಬಳಿಕ ಇದಕ್ಕೆಸಂಬಂಧಿಸಿ, ಅಧಿಕಾರಿ-ಸದಸ್ಯರ ನಡುವೆ ವಾಗ್ಯುದ್ಧ ನಡೆಯಿತು. ಪುರಸಭೆ ಸಿಬ್ಬಂದಿ ನೀಡುವ ಮಾಹಿತಿಗೆ ಹಲವು ಬಾರಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಒಂದು ಹಂತದಲ್ಲಿ ವಿಚಾರಗಳಿಗೆ ಸಂಬಂಧಿಸಿ ಸದಸ್ಯರ ನಡುವೆ ಮಾತಿನ ಚಕಮಕಿಗಳೂ ನಡೆದವು.
ಕುಡಿಯುವ ನೀರಿನ ಬಿಲ್ ಏರುಪೇರು, ಸಮರ್ಪಕವಾಗಿ ನೀರು ಪೂರೈಕೆ ಆಗದೇ ಇರುವುದು, ಬೀದಿದೀಪದ ಸಮಸ್ಯೆಗಳು, ಏಲಂ ಪ್ರಕ್ರಿಯೆಯ ಸಮಸ್ಯೆಗಳು, ತ್ಯಾಜ್ಯ ಸಹಿತ ವಿವಿಧ ವಿಷಯಗಳ ಕುರಿತು ವಿಸ್ತೃತ ಚರ್ಚೆಗಳನ್ನು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಸಹಿತ ಸದಸ್ಯರಾದ ಬಿ.ವಾಸು ಪೂಜಾರಿ, ಪಿ.ರಾಮಕೃಷ್ಣ ಆಳ್ವ, ಮೀನಾಕ್ಷಿ ಜೆ. ಗೌಡ, ಗಂಗಾಧರ ಪೂಜಾರಿ, ರೇಖಾ ಪೈ, ಜನಾರ್ದನ ಚಂಡ್ತಿಮಾರ್, ದೇವಕಿ ಪೂಜಾರಿ, ಶಶಿಕಲಾ ಪ್ರಭಾಕರ್, ಮುನೀಶ್ ಆಲಿ ಅಹಮ್ಮದ್, ಹರಿಪ್ರಸಾದ್, ಶೋಭಾ ಹರಿಶ್ಚಂದ್ರ, ಜಯಂತಿ ಕುಲಾಲ್, ವಿದ್ಯಾವತಿ ಪ್ರಮೋದ್ ಕುಮಾರ್, ಮೊಹಮ್ಮದ್ ನಂದರಬೆಟ್ಟು, ಹಸೈನಾರ್, ಲೋಲಾಕ್ಷ ಶೆಟ್ಟಿ, ಚೈತನ್ಯಾ ಎ. ದಾಸ್, ಮೊಹಮ್ಮದ್ ಇದ್ರಿಸ್, ಅಬುಬಕ್ಕರ್ ಸಿದ್ದಿಕ್ ಗುಡ್ಡೆಯಂಗಡಿ, ಗಾಯತ್ರಿ ಜೆ, ಜಯರಾಮ ನಾಯ್ಕ ವಿವಿಧ ವಿಷಯಗಳ ಕುರಿತು ಮಾತನಾಡಿದರು. ನೀರು ಸರಬರಾಜು ಪೈಪ್ ಲೈನ್ ವಿಚಾರವಾಗಿ ಇಂಜಿನಿಯರ್ ಶೋಭಾಲಕ್ಷ್ಮಿ ಮಾಹಿತಿ ನೀಡಿದರು.