ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಮಾಜಿಕ ಜಾಲತಾಣ- ಸಾಧಕ-ಬಾಧಕಗಳು ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ, ಪ್ರೆಸ್ ಕ್ಲಬ್ ಬಿ.ಸಿ.ರೋಡ್ ಹಾಗೂ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಉಪನ್ಯಾಸ ನೀಡಿದರು.
ಸಾಮಾಜಿಕ ಜಾಲತಾಣಗಳ ಸಾಧಕಗಳಿಗಿಂತ ಬಾಧಕಗಳ ಬಗ್ಗೆ ತಿಳಿವಳಿಕೆ ಅಗತ್ಯ. ಸಾಮಾಜಿಕ ಜಾಲತಾಣ ಅತಿಯಾಗಿ ಬಳಸಿದರೆ ಜೀವ ಹಾಗೂ ಜೀವನಕ್ಕೆ ಮಾರಕವಾಗಲಿದೆ ಎಂದವರು ಹೇಳಿ, ಪೊಲೀಸ್ ಇಲಾಖೆಯ ಕಾರ್ಯವೈಖರಿ, ಸೋಶಿಯಲ್ ಮೀಡಿಯಾದ ದುಷ್ಪರಿಣಾಮಗಳ ಕುರಿತು ಸೂಕ್ಷ್ಮವಾಗಿ ವಿವರಿಸಿದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಈ ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಸೌಮ್ಯಾ ಎಚ್.ಕೆ. ಮಾತನಾಡಿ, ಆಧುನಿಕ ಶಿಕ್ಷಣಕ್ಕೆ ಸಾಮಾಜಿಕ ಜಾಲತಾಣ ಪೂರಕವಾಗಿದ್ದು, ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಬಳಸುವುದು ಅತಿಮುಖ್ಯ ಎಂದರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮಾಂಬಾಡಿ,, ಬಂಟ್ವಾಳ ತಾ.ಪಂ.ನ ನಿಕಟಪೂರ್ವ ಸದಸ್ಯ ಪ್ರಭಾಕರ ಪ್ರಭು ಶುಭ ಹಾರೈಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು. ಸಂಘದ ಸದಸ್ಯ ರತ್ನದೇವ್ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ವಿನಯ್ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಮೌನೇಶ್ ವಿಶ್ವಕರ್ಮ ಪ್ರಸ್ತಾವಿಸಿದರು. ಗ್ರಂಥಪಾಲಕ ಡಾ. ಶ್ರೀನಿವಾಸ್ ವಂದಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.