ಕವರ್ ಸ್ಟೋರಿ

ಬಂಟ್ವಾಳ ರೈಲ್ವೆ ಸ್ಟೇಶನ್ ನಲ್ಲಿ ಪಾದಚಾರಿ ಮೇಲ್ಸೇತುವೆಯಾದರೆ ಬಹಳಷ್ಟು ಲಾಭ.. ಅದು ಹೇಗೆ?

ಹರೀಶ ಮಾಂಬಾಡಿ, www.bantwalnews.com

ಗಗನಕ್ಕೇರುವ ದರದ ನಡುವೆಯೂ ಪ್ರಯಾಣದ ವೆಚ್ಚ ಕಡಿಮೆ, ಸುಖಕರ ಆರಾಮದಾಯಕ ಜರ್ನಿಯನ್ನು ಕೊಡುವ ರೈಲ್ವೆಯನ್ನು ಇಷ್ಟಪಡುವವರು ಹಲವಾರು ಮಂದಿ ಇದ್ದಾರೆ. ಬಂಟ್ವಾಳವೆನ್ನುವುದು ಅಂಥ ನೂರಾರು ಮಂದಿಗೆ ಬೆಳ್ತಂಗಡಿ, ವಿಟ್ಲ, ವಾಮದಪದವು, ಮೂಡುಬಿದಿರೆಯಂಥ ಪ್ರದೇಶಗಳವರನ್ನೂ ಸೇರಿಸಿಕೊಂಡು ಜಂಕ್ಷನ್. ಇಂಥ ಜಾಗದಲ್ಲಿ ಬೆಂಗಳೂರಿನಿಂದ ಅಥವಾ ಇನ್ಯಾವುದಾದರೂ ಪ್ರದೇಶಗಳಿಂದ ರೈಲಿನಲ್ಲಿ ಬಂದಿಳಿದರೆ, ಬಿ.ಸಿ.ರೋಡ್ ಪೇಟೆಗೆ ತಲುಪಬೇಕೆಂದಿದ್ದರೆ, ಪ್ಲಾಟ್ ಫಾರ್ಮ್ ನಿಂದ ಮುನ್ನಡೆದು ಹಳೇ ಹೆದ್ದಾರಿಯಲ್ಲಿ ಹೆಜ್ಜೆಹಾಕಿ, ಬಿ.ಸಿ.ರೋಡಿನ ನಾಲ್ಕು ಮಾರ್ಗ ಸೇರುವ ಜಾಗಕ್ಕೆ ಬಂದು, ಅಲ್ಲಿಂದ ನಿಧಾನವಾಗಿ ಕೆಳಗೆ ಪೇಟೆಯ ಕಡೆಗೆ ಸಾಗಬೇಕು. ನಡೆದುಕೊಂಡು ಹೋಗುವುದಿದ್ದರೂ ದೂರ, ವಾಹನದಲ್ಲಿ ಸಾಗುವುದಿದ್ದರೂ ಹತ್ತಿರವೇನಲ್ಲ. ಆದರೆ ಮೊದಲೇ ಪ್ಲಾಟ್ ಫಾರ್ಮಿನಿಂದ ಎರಡನೇ ಪ್ಲಾಟ್ ಫಾರ್ಮಿಗೆ ಹೇಗೋ ಬಂದರೆ, ಅಲ್ಲಿಂದ ಕೆಲವು ಹೆಜ್ಜೆ ಕೆಳಗಿಳಿದರೆ, ಕೈಕುಂಜೆ ಮಾರ್ಗದಲ್ಲಿ ಕೇವಲ 750 ಮೀಟರ್ ದೂರದಲ್ಲೇ ಬಿ.ಸಿ.ರೋಡ್ ಪೇಟೆ ಸಿಗುತ್ತದೆ. ದಾರಿಯ ಅಕ್ಕಪಕ್ಕ ಅಂಗಡಿ, ಹೋಟೆಲ್, ಮನೆಗಳು, ಕಚೇರಿಗಳು.. ಕಾಂಕ್ರೀಟ್ ಮಾರ್ಗವಾದ ಕಾರಣ ಸಣ್ಣ ಲಗ್ಗೇಜ್ ಇದ್ದರೆ ನಡೆದುಕೊಂಡು ಹೋಗಲೂ ಸುಲಭ.. ಇಷ್ಟಾಗಬೇಕಿದ್ದರೆ, ಮೊದಲನೇ ಪ್ಲಾಟ್ ಫಾರ್ಮ್ ನಿಂದ ಎರಡನೇ ಪ್ಲಾಟ್ ಫಾರ್ಮ್ ಗೆ ಸಾಗಲು ಪಾದಚಾರಿ ಮೇಲ್ಸೇತುವೆ ಆಗಬೇಕು…. ಇಂಥ ಮನವಿ, ಪ್ರಸ್ತಾವನೆಗಳು ಆಗಾಗ್ಗೆ ರೈಲ್ವೆ ಇಲಾಖೆಗೆ ರವಾನೆಯಾಗುತ್ತಲೇ ಇತ್ತು.. ಮುಂದೆ ಏನಾಯಿತು?

ಕೈಕುಂಜೆ ಭಾಗಕ್ಕೆ ಎರಡನೇ ಪ್ಲಾಟ್ ಫಾರ್ಮ್ ನಿಂದ ಕೆಳಗಿಳಿಯಲು ಈಗ ಮಾಡಲಾಗುತ್ತಿರುವ ವ್ಯವಸ್ಥೆ. ಇದು ಸಂಪೂರ್ಣಗೊಂಡರೆ ರೈಲ್ವೆ ನಿಲ್ದಾಣ ಬಿ.ಸಿ.ರೋಡ್ ಪೇಟೆಗೆ ಮತ್ತಷ್ಟು ಹತ್ತಿರ.

ಆದರ್ಶ ಯೋಜನೆಯಡಿ ವಿವಿಧ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ವೇಳೆ ಈ ಪಾದಚಾರಿ ಮೇಲ್ಸೇತುವೆಗೂ ಅವಕಾಶ ಸಿಕ್ಕಿತು. ಒಟ್ಟಾರೆಯಾಗಿ ಇಡೀ ರೈಲ್ವೆ ನಿಲ್ದಾಣದ ಸ್ವರೂಪವೇ 2019ರಂದು ಬದಲಾವಣೆಗೊಳ್ಳಲು ಆರಂಭಗೊಂಡಾಗ ಮೇಲ್ಸೇತುವೆ ನಿರ್ಮಾಣವೂ ಆಗುತ್ತದೆ ಎಂಬ ಕನಸು ನನಸಾಗುವ ಹಂತಕ್ಕೆ ಬಂದಿತ್ತು. ಆದರೆ ಕೊರೊನಾ ಇಡೀ ಕೆಲಸಕ್ಕೇ ಸಾಕಷ್ಟು ಹೊಡೆತ ನೀಡಿದ್ದು ನಿಜ. ಇದೀಗ ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಅಕ್ಟೋಬರ್ ನಿಂದ ಮೇಲ್ಸೇತುವೆ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಒಂದು ವೇಳೇ ಅಂದುಕೊಂಡಂತೆ ಮೇಲ್ಸೇತುವೆ ನಿರ್ಮಾಣವಾದರೆ ಪಾದಚಾರಿಗಳಷ್ಟೇ ಅಲ್ಲ, ಇಲಾಖಾ ನಿರ್ವಹಣೆಯ ಬಹಳಷ್ಟು ಸಮಸ್ಯೆಗಳಿಗೆ ಇದು ಪೂರ್ಣವಿರಾಮ ಹಾಕಲಿದೆ. ಅದು ಹೇಗೆ?

ಜಾಹೀರಾತು
ಎರಡನೇ ಪ್ಲಾಟ್ ಫಾರ್ಮ್

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ರೈಲು ಪ್ರಯಾಣಕ್ಕೆಂದೇ ಬರುವ ಜನರು ಧನಿಕರೇನೂ ಅಲ್ಲ. ಸಾಮಾನ್ಯವಾಗಿ ಒಂದು ಲಗ್ಗೇಜ್ ಏನಾದರೂ ಇದ್ದರೆ, ನಡೆದುಕೊಂಡೇ ಬರುತ್ತಾರೆ. ಸ್ಥಳದ ಕುರಿತು ಗೊತ್ತಿರುವವರು ಆಯ್ಕೆ ಮಾಡಿಕೊಳ್ಳುವ ಜಾಗ ರಕ್ತೇಶ್ವರಿ ದೇವಸ್ಥಾದಿಂದ ಮುಂದೆ ಸಾಗುವ ಕೈಕುಂಜೆ ಮಾರ್ಗ. ಅಲ್ಲಿಂದ ಎರಡನೇ ಪ್ಲಾಟ್ ಫಾರ್ಮ್ ಇದ್ದ ಜಾಗಕ್ಕೆ ಬಂದು ಮೊದಲನೇ ಪ್ಲಾಟ್ ಫಾರ್ಮ್ ಗೆ ರೈಲ್ವೆ ಮಾರ್ಗಕ್ಕಿಳಿದು, ಹೇಗೋ ಪ್ರಯಾಸಪಟ್ಟು ಅಲ್ಲಿಗೆ ತಲುಪುತ್ತಾರೆ. ಇದು ಅಪಾಯಕಾರಿಯೂ ಹೌದು, ಇದು ನಿಷಿದ್ಧವೂ ಹೌದು. ಮೇಲ್ಸೇತುವೆಯಾದರೆ ಇಂಥ ಸಮಸ್ಯೆಗೆ ಮುಕ್ತಿ ದೊರಕುತ್ತದೆ. ಇಲಾಖೆಯೂ ಜನಸ್ನೇಹಿಯಾಗಲು ಜೊತೆಗೆ ಜನರೂ ರೈಲಿನತ್ತ ಹೆಚ್ಚು ಮುಖಮಾಡಲು ಇದು ಸಾಧ್ಯವಾಗುತ್ತದೆ. ಸುರಕ್ಷತೆಯೂ ಬೇಕು: ಮೇಲ್ಸೇತುವೆ ಮಾಡಿದ ಮೇಲೆ ಅದರ ಸುರಕ್ಷತೆಯನ್ನೂ ಮಾಡುವುದು ಅತ್ಯಂತ ಅಗತ್ಯ. ಸಾಮಾನ್ಯವಾಗಿ ಪಾದಚಾರಿ ಮೇಲ್ಸೇತುವೆಯಲ್ಲಿ ವಿನಾ ಕಾರಣ ನಿಲ್ಲುವುದು ಅಥವಾ ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವಂಥ ಕೆಲಸಗಳು ಉಂಟಾಗುತ್ತದೆ ಎಂದಾದರೆ ಅದನ್ನು ಕಟ್ಟುನಿಟ್ಟಾಗಿ ಮಾನಿಟರ್ ಮಾಡಲು ಇಡೀ ರೈಲ್ವೆ ನಿಲ್ದಾಣದಲ್ಲಿ ಸುರಕ್ಷತೆಗೆ ಸಿಸಿ ಕ್ಯಾಮರಾವನ್ನು ಅಳವಡಿಸಲಾಗುತ್ತದೆ ಎಂದು 2019ರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ವೇಳೆ ಹೇಳಿದ್ದರು. ಆ ದಿಸೆಯಲ್ಲಿ ರೈಲ್ವೆ ನಿಲ್ದಾಣ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಪ್ರಯಾಣಿಕರ ಸುರಕ್ಷತೆಯ ದಿಸೆಯಲ್ಲಿಯೂ ಹೆಜ್ಜೆಯಿಡುವತ್ತ ಸಾಗಿದೆ. ಈ ಕಾಮಗಾರಿಗಳು ವೇಗವಾಗಿ ಸಾಗಬೇಕೆಂದಿದ್ದರೆ, ಜನಪ್ರತಿನಿಧಿಗಳು ಆಗಾಗ್ಗೆ ಸ್ಥಳಪರಿಶೀಲನೆ ಮಾಡಿ ಪ್ರಗತಿಯ ಕುರಿತು ಪರಿಶೀಲಿಸುವುದೂ ಮುಖ್ಯವಾಗುತ್ತದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ, ಜಾಗೃತ ನಾಗರಿಕರಿದ್ದರೆ, ಬೇಗನೆ ಬಂಟ್ವಾಳ ರೈಲ್ವೆ ನಿಲ್ದಾಣ ಜನಸ್ನೇಹಿಯಾಗಬಹುದು.

ಬಂಟ್ವಾಳ ರೈಲ್ವೆ ನಿಲ್ದಾಣ


ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.