ಬಂಟ್ವಾಳ: ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ಇದರ ರಾಜ್ಯ ಪ್ರತಿನಿಧಿ ಸಭೆ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಿತು. ಮಹಿಳೆಯರ ರಕ್ಷಣೆ, ಬೆಲೆ ಏರಿಕೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ. ರಾಜ್ಯ ಉಪಾಧ್ಯಕ್ಷೆ ಶಬಾನ ಬೆಂಗಳೂರು ಧ್ವಜಾರೋಹಣ ನಡೆಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತನ್ನಾಡಿದರು . ರಾಜ್ಯ ಪ್ರಧಾನ ಕಾರ್ಯದರ್ಶಿ ತಬಸ್ಸುಮ್ ಅರಾ ವಾರ್ಷಿಕ ವರದಿಯನ್ನು ಮಂಡಿಸಿದರು. 2021 ನೇ ಸಾಲಿನ ನೂತನ ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಾಷ್ಟ್ರೀಯ ಸಮಿತಿ ಸದಸ್ಯರಾದ ಲುಬ್ನಾ ಮೀನಾಝ್, ನೌಶೀರಾ ಕೆಮ್ಮಾರ ನಡೆಸಿಕೊಟ್ಟರು.
2021-23 ನೇ ಸಾಲಿನ ರಾಜ್ಯಾಧ್ಯಕ್ಷೆಯಾಗಿ ಫರ್ಝಾನಾ ಮುಹಮ್ಮದ್, ಉಪಾಧ್ಯಕ್ಷೆಯಾಗಿ ಸೈದಾ ಯೂಸುಫ್ ಪ್ರಧಾನ ಕಾರ್ಯದರ್ಶಿಯಾಗಿ ಬೀಬಿ ಆಯಿಷಾ ಬೆಂಗಳೂರು ಕಾರ್ಯದರ್ಶಿಯಾಗಿ ರಮ್ಲತ್ ವಾಮಂಜೂರು ಕೋಶಾಧಿಕಾರಿಯಾಗಿ ಫಾತಿಮಾ ನಸೀಮ ಮಂಗಳೂರು ಆಯ್ಕೆಯಾದರು.
ತಬಸ್ಸುಮ್ ಅರಾ ತುಮಕೂರ್, ನಸೀಮ್ ಝುರೈ ಉಡುಪಿ , ಝುಲೈಕಾ ಮಂಗಳೂರು , ನುಜ್ ಹತ್ ಗುಲ್ಬರ್ಗ, ಶಬಾನ ದಾವಣಗೆರೆ,ಝಕೀಯಾ ಮಡಿಕೇರಿ, ಯಾಸ್ಮೀನ್ ಬೆಳ್ತಂಗಡಿ, ನಾಝಿಯಾ ಬಿಜಾಪುರ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಫರ್ಝನ ಕಾರ್ಯಕ್ರಮ ನಿರೂಪಿಸಿದರು. ಯಾಸ್ಮೀನ್ ವಂದಿಸಿದರು.ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆಗೆ ಕ್ರಮ, ಮಹಿಳಾ ಭದ್ರತೆಯನ್ನು ಆದ್ಯತೆಯಾಗಿ ಪರಿಗಣಿಸಿ ಸರಕಾರವು ಆರೋಪಿಗಳು ಯಾವುದೇ ಪ್ರಭಾವ ಬಳಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತಹ ಕಠಿಣ ಕಾನೂನು ಜಾರಿಯಾಗಬೇಕು. ಶಾಲೆಗಳಲ್ಲಿ ಸ್ವಯಂ ರಕ್ಷಣಾ ಕಲೆಗಳನ್ನು ಕಡ್ಡಾಯಗೊಳಿಸಬೇಕು. ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು. ಇದಕ್ಕಾಗಿ ವಿಶೇಷ ತನಿಖಾ ಆಯೋಗ ರಚಿಸಿ, ಪ್ರತೀ ಜಿಲ್ಲೆಗಳಲ್ಲೂ ಇವು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಬೇಕೆಂದು ಸಭೆ ಒತ್ತಾಯಿಸಿದೆ.ಬೆಲೆ ಏರಿಕೆ ಸಮಸ್ಯೆಯನ್ನು ಸರಕಾರವು ಭಿರವಾಗಿ ಪರಿಗಣಿಸಿ ಇಂತಹ ಜನವಿರೋಧಿ, ಮಹಿಳಾ ವಿರೋಧಿ ನೀತಿಗಳನ್ನು ಹಿಂಪಡೆದು ಆತಂಕ ರಹಿತ ಜೀವನ ನಿರ್ವಹಣೆಗೆ ಅನುವು ಮಾಡಿಕೊಡಬೇಕೆಂದು ಸಭೆಯು ಒತ್ತಾಯಿಸಿದೆ.ಸಾರ್ವಜನಿಕ ಚರ್ಚೆಗೆ ಆಸ್ಪದ ನೀಡದೇ ರಾಷ್ಟ್ರೀಯ ಶಿಕ್ಷಣ ನೀತಿ 2020ಯನ್ನು ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಸರಕಾರದ ಕ್ರಮವನ್ನು ಸಭೆ ವಿರೋಧಿಸಿದೆ.