ಬಂಟ್ವಾಳ: ಬಂಟ್ವಾಳ ತಾಲೂಕಿನ ಕೋಡಪದವಿನ ಪಂಜಿಗದ್ದೆಯ ಪಿ.ಕೃಷ್ಣ ಭಟ್ ಅವರು ಹೈಕೋರ್ಟ್ ನ್ಯಾಯಾಧೀಶರಾಗಿದ್ದಾರೆ . ಕಳೆದ ವರ್ಷ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಕೋಡಪದವು ಪಂಜಿಗದ್ದೆ ಸರವು ಮನೆಯ ಪಿ.ನಾರಾಯಣ ಭಟ್ ಮತ್ತು ಪರಮೇಶ್ವರಿ ದಂಪತಿಯ ನಾಲ್ವರು ಮಕ್ಕಳಲ್ಲಿ ಮೂರನೇಯವರಾಗಿ 1960ರ ಆಗಸ್ಟ್ 8ರಂದು ಜನಿಸಿದ ಭಟ್, ಅವರಿಗೆ ಓರ್ವ ಸಹೋದರಿ ಮತ್ತು ಇಬ್ಬರು ಸಹೋದರರು ಇದ್ದಾರೆ. ಕೋಡಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ, ವಿಟ್ಲ ಜ್ಯೂನಿಯರ್ ಕಾಲೇಜಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕೈಗೊಂಡರು. ಬಳಿಕ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಅಭ್ಯಸಿಸಿದ ಅವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ ಸಿ ಪದವಿಯನ್ನು ಪಡೆದರು. ಕಾನೂನು ವ್ಯಾಸಂಗದಲ್ಲಿ ಆಸಕ್ತಿ ಹೊಂದಿದ್ದ ಅವರು, ಬನಾರಸ್ ಹಿಂದು ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದು, ಮಂಗಳೂರಿನಲ್ಲಿ 1986ರಿಂದ 89ರವರೆಗೆ ಮೂರು ವರ್ಷ ವರ್ಷಗಳ ಕಾಲ ಹಿರಿಯ ನ್ಯಾಯವಾದಿ ನೂಯಿ ಶ್ರೀನಿವಾಸ ರಾವ್ ಜೊತೆ ವಕೀಲ ವೃತ್ತಿ ಕೈಗೊಂಡರು. 1989ರಿಂದ 1998ರವರೆಗೆ ಬೆಂಗಳೂರಿನಲ್ಲಿ ಹೈಕೋರ್ಟ್ ನ್ಯಾಯವಾದಿಯಾಗಿ ವೃತ್ತಿ ನಿರ್ವಹಿಸಿದ್ದಾರೆ. 1998ರ ಜೂನ್ ನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡ ಅವರು, ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ರಿಜಿಸ್ಟ್ರಾರ್ ಜನರಲ್ ಆಗಿ, ಕರ್ನಾಟಕ ಜ್ಯೂಡಿಶಿಯಲ್ ಅಕಾಡೆಮಿಯ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಬೆಂಗಳೂರಿನಲ್ಲಿ ಪತ್ನಿ, ಪುತ್ರ ಮತ್ತು ಪುತ್ರಿಯೊಂದಿಗೆ ವಾಸಿಸುತ್ತಿದ್ದಾರೆ.