ಬಂಟ್ವಾಳ: ಗೂಡ್ಸ್ ಕ್ಯಾರಿಯರ್ ಒಂದರಲ್ಲಿ ಪಡಿತರ ಅಕ್ಕಿಗಳಿರುವ 50 ಕೆಜಿಯ 40 ಗೋಣಿಚೀಲವನ್ನು ಕಾನೂನುಬಾಹಿರವಾಗಿ ಸಾಗಾಟ ಮಾಡುವ ಪ್ರಕರಣವನ್ನು ಬಂಟ್ವಾಳ ತಾಲೂಕಿನ ಆಹಾರ ನಿರೀಕ್ಷಕರು ಪತ್ತೆಹಚ್ಚಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಜಿಪನಡು ಗ್ರಾಮದ ಬಸ್ತಿಗುಡ್ಡೆಯ ನೌಫಲ್ ಬಿನ್ ಯೂಸೂಫ್ (26) ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಾಳ್ತಿಲ ಗ್ರಾಮದ ಕೊಡಂಗೆಕೋಡಿ ಎಂಬಲ್ಲಿ ಬಿ.ಸಿ.ರೋಡ್ ಕಡೆಗೆ ಸಾಗುತ್ತಿದ್ದ ಗೂಡ್ಸ್ ಕ್ಯಾರಿಯರ್ ಅನ್ನು ಆಹಾರ ಶಿರಸ್ತೇದಾರ್ ನೇತೃತ್ವದಲ್ಲಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಉಚಿತ ಪಡಿತರ ಅಕ್ಕಿಗಳುಳ್ಳ ತಲಾ 50 ಕೆ.ಜಿ.ಯ 40 ಗೋಣಿ ಚೀಲಗಳನ್ನು(2ಟನ್) ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುವುದರಿಂದ ಅಕ್ಕಿಗಳುಳ್ಳ ಗೋಣಿ ಚೀಲಗಳನ್ನು ವಶಪಡಿಸಿಕೊಂಡು ಹಾಳಾಗುವ ಹಿತದೃಷ್ಟಿಯಿಂದ ಬಿ.ಸಿ.ರೋಡಿನ ಕೆ.ಎಫ್.ಸಿ ಗೋದಾಮಿಗೆ ದಾಸ್ತಾನು ಇರಿಸಲಾಯಿತು. ಕಾನೂನು ಬಾಹಿರವಾಗಿ ಸಾಗಾಟ ಮಾಡಿದ ವಾಹನವನ್ನು ವಶಪಡಿಸಿಕೊಂಡು ಚಾಲಕ ಸಜಿಪನಡು ಗ್ರಾಮದ ಬಸ್ತಿಗುಡ್ಡೆಯ ನೌಫಲ್ ಬಿನ್ ಯೂಸೂಫ್ (26) ಎಂಬಾತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ತನಿಖೆ ಸಾಗಿದೆ.