ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ ಆಚರಣೆ ಪ್ರಯುಕ್ತ ಸರಪಾಡಿಯ ಹಲ್ಲಂಗಾರು ಕಟ್ಟೆ ಸಹಿತ ವಿವಿಧೆಡೆಯಲ್ಲಿ ವಿಶೇಷ ಪೂಜೆ ನಡೆಯಿತು. ವರ್ಷಂಪ್ರತಿ ಸಂಪ್ರದಾಯ ಪ್ರಕಾರ ಕನ್ಯಾ ಸಂಕ್ರಮಣದ ಮರು ದಿವಸ ನಡೆಯುವ ತೆನೆಹಬ್ಬ ಆಚರಣೆಗಾಗಿ ಕಾರಿಂಜದಿಂದ ಸುಮಾರು 9 ಕಿ.ಮೀ. ದೂರವಿರುವ ಸರಪಾಡಿಯ ಗದ್ದೆಯೊಂದರಿಂದ ತೆನೆಗಳನ್ನು ತರಲಾಗುತ್ತಿದ್ದು, ಈ ಬಾರಿಯೂ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಕಾರಿಂಜದಿಂದ ವಾದ್ಯ ವೃಂದ ಸಹಿತವಾಗಿ ಅರ್ಚಕರು, ತಂತ್ರಿಗಳು, ಗ್ರಾಮಣಿಗಳು,ಮುಖ್ಯಸ್ಥರು ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟು ದಾರಿಯಲ್ಲಿ ಏಳು ಕಟ್ಟೆಗಳಾದ ಶೇಡಿಮೆ ಕಟ್ಟೆ, ದಂಡ್ಯೊಟ್ಟು ಕಟ್ಟೆ, ದೇವಶ್ಯ ಕಟ್ಟೆ, ಸೂಳ್ದು ಕಟ್ಟೆ, ಭಂಡಾರಿಕಟ್ಟೆ, ಸಮಗಾರನ ಕಟ್ಟೆ ಮತ್ತು ಹಲ್ಲಂಗಾರ್ ಕಟ್ಟೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ನೀಡಲಾಯಿತು. ಕೊನೆಯ ಕಟ್ಟೆ ಹಲ್ಲಂಗಾರು ಕಟ್ಟೆಯನ್ನು ಈಶ್ವರ ಸನ್ನಿಧಿ ಎಂದು ಪರಿಗಣಿಸಿ ದರ್ಶನ ಬಲಿ ಸಹಿತ ಪೂಜೆ ನಡೆಯಿತು. ಬಳಿಕ ಸಮೀಪದಲ್ಲಿ ಬಂಗಾರದ ತೆನೆ ಬೆಳೆಯಿತೆನ್ನಲಾದ ಜೈನ ಮನೆತನದ ಲೀಲಾವತಿ ಅಮ್ಮ ಅವರ ಕಂಬಳದ ಗದ್ದೆಯಿಂದ ತೆನೆ ತಂದು ಅದನ್ನು ಹೊಸ ವಸ್ತ್ರದಲ್ಲಿ ಹೊದಿಸಿ ಸಮರ್ಪಿಸಲಾಯಿತು. ನಂತರ ಶ್ರೀ ಕ್ಷೇತ್ರ ಕಾರಿಂಜಕ್ಕೆ ತಂದು ಲಕ್ಷ್ಮೀ ಪೂಜೆ ನಡೆಸಿ ದೇವಸ್ಥಾನಕ್ಕೆ ತೆನೆ ಕಟ್ಟಲಾಯಿತು. ಕಾರ್ಯಕ್ರಮದಲ್ಲಿ ಪರಿಸರದ ಭಕ್ತರು ಶ್ರದ್ಧಾ, ಭಕ್ತಿಯಿಂದ ಭಾಗವಹಿಸಿದರು.ಸರಪಾಡಿ, ಮಣಿನಾಲ್ಕೂರು ಗ್ರಾಮಸ್ಥರು ಈ ತೆನೆ ಹಬ್ಬದಲ್ಲಿ ಭಾಗವಹಿಸಿ ತಮ್ಮ ವ್ಯಾಪ್ತಿಯ ಕಟ್ಟೆಗಳಿಂದ ತೆನೆ ಸಂಗ್ರಹಿಸಿ ಮನೆ ತುಂಬಿಸಿ ಹೊಸ ಅಕ್ಕಿ ಊಟ ಮಾಡುತ್ತಾರೆ. ಶ್ರೀ ಶರಭೇಶ್ವರ ದೇವಸ್ಥಾನದಲ್ಲಿಯೂ ತೆನೆ ವಿತರಿಸಲಾಯಿತು.