ಬಂಟ್ವಾಳ: ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಪೊರ್ಕಡೆ ಎಂಬಲ್ಲಿ ನೇತ್ರಾವತಿ ನದಿಯಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋಣಿ ಚೀಲದಲ್ಲಿ ಸಂಗ್ರಹ ಮಾಡಿ ಮರಳು ತುಂಬಿಸಿಡುವ ಕುರಿತ ಖಚಿತ ಮಾಹಿತಿಯಂತೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಈ ಸಂದರ್ಭ ಅಕ್ರಮವಾಗಿ ಸಂಗ್ರಹ ಮಾಡಿದ ಮರಳು ಹಾಗೂ ಮರಳುಗಾರಿಕೆಗೆ ಬಳಸಲಾಗಿದ್ದ ಟ್ಯೂಬ್ ಮತ್ತಿತರ ಪರಿಕರಗಳನ್ನು ವಶಪಡಿಸಲಾಗಿದೆ. ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಮಣಿ, ಕಾರ್ಯದರ್ಶಿ ವಸಂತ ಪೂಜಾರಿ, ಗ್ರಾಮ ಲೆಕ್ಕಾಧಿಕಾರಿ ಕುಮಾರ ಟಿ.ಸಿ, ಗ್ರಾಮ ಸಹಾಯಕರಾದ ಸಂದೇಶ್, ಶಿವಪ್ರಸಾದ್, ಗ್ರಾಮಾಂತರ ಪೊಲೀಸರು ಇದ್ದರು.