ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದಿ ಭಾಷ ಶಿಕ್ಷಕ ಸಂಘದ ವತಿಯಿಂದ ಬಿಸಿರೋಡು ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಹಿಂದಿ ದಿವಸ ಆಚರಣೆ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳ ಮನಸ್ಸಿಗೆ ಖುಷಿಯಾಗುವ ರೀತಿಯಲ್ಲಿ ಶಿಕ್ಷಣವನ್ನು ನೀಡಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.ಬಿ.ಆರ್.ಸಿ.ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊರೊನಾ ಸಂಕಷ್ಟದ ಅವಧಿಯಲ್ಲಿ ವಿದ್ಯಾರ್ಥಿ ಗಳ ಜೊತೆ ಸಂಭಾಷಣೆ ಯ ಸಂಪರ್ಕ ಕಳೆದುಕೊಂಡಿರುವುದು ಶಿಕ್ಷಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳನ್ನು ಖುಷಿಯಿಂದ ಬರಮಾಡಿಕೊಂಡು ಶಿಕ್ಷಣ ನೀಡೋಣ ಎಂದರು.
ಪತ್ರಕರ್ತ ಹರೀಶ್ ಮಾಂಬಾಡಿ ಮಾತನಾಡಿ , ಹಿಂದಿ ಭಾಷೆಯ ವೈವಿಧ್ಯತೆ ಗಳನ್ನು ಶಾಲೆಯ ಮೂಲಕ ಮಾತ್ರ ಕಲಿಯಬಹುದು ಎಂದು ಶುಭ ಹಾರೈಸಿದರು. ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಇಂಮ್ತಿಯಾಜ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮಹೇಶ್ ಆಚಾರ್ ಹಿಂದಿ ಭಾಷೆಯ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಪದೋನ್ನೊತಿ ಹೊಂದಿದ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರ ನ್ನು ಕಾರ್ಯಕ್ರಮ ದಲ್ಲಿ ಗೌರವಿಸಲಾಯಿತು. ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸೂರ್ಯ ಶಾಲೆಯ ಶಿಕ್ಷಕ ಶಿವಕುಮಾರ್ ಹಿಚ್ಕಡ್, ಗೋಳ್ತಮಜಲು ಶಾಲಾ ಶಿಕ್ಷಕ ಶಂಕರ್ ಪಾವಸ್ಕರ್ ಅವರನ್ನು ಗೌರವಿಸಲಾಯಿತು. ಹಿಂದಿ ಸಂಘದ ಸದಸ್ಯರ ಸಮಿತಿಯ ಮೂಲಕ ವಿಶೇಷವಾಗಿ ಹಿಂದಿ ವರ್ಕ್ ಬುಕ್ ತಯಾರು ಮಾಡಿದ್ದು ಸಮಿತಿ ಸದಸ್ಯರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷೆ ದೀಪಿಕಾ ಸ್ವಾಗತಿಸಿ, ಉಪಾಧ್ಯಕ್ಷ ಪಂಚಾಕ್ಷರಿ ಧನ್ಯವಾದ ನೀಡಿದರು.ಶಿಕ್ಷಕ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.