ಮಂಗಳೂರು: ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೆ.8ರ ಬುಧವಾರ ಜಿಲ್ಲೆಯಾದ್ಯಂತ ಎಲ್ಲಾ ಆರೋಗ್ಯ ಸಂಸ್ಥೆ ಮತ್ತು ಉಪಕೆಂದ್ರಗಳಲ್ಲಿ ಕೋವಿಡ್ ಲಸಿಕೆಯ ವಿಶೇಷ ಲಕ್ಷ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕಾ ಮೇಳದಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಲಸಿಕಾ ಮೇಳಕ್ಕೆ ಆಗಮಿಸಲು ಕೋರಲಾಗಿದೆ, ಈ ಮೇಳದಲ್ಲಿ ಪ್ರಥಮ ಡೋಸ್ ಮತ್ತು ಎರಡನೆಯ ಡೋಸ್ ಲಸಿಕೆಯನ್ನು ನೀಡಲಾಗುವುದು. 18 ವರ್ಷ ಮೇಲ್ಪಟ್ಟ ಎಲ್ಲಾ ಲಸಿಕಾ ಫಲಾನುಭವಿಗಳು ಹಾಗೂ ಗರ್ಣಿಣಿಯರಿಗೂ ಕೂಡಾ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ವಿವಿಧೆಡೆ ಒಟ್ಟು 76 ಕೇಂದ್ರಗಳಲ್ಲಿ 15,360 ಲಸಿಕೆಗಳನ್ನು ಸೆ.8ರಂದು ನಡೆಯುವ ಲಕ್ಷ ಲಸಿಕಾ ಅಭಿಯಾನದಲ್ಲಿ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ. ಮೊದಲ ಆದ್ಯತೆಯನ್ನು ಅಂಗವಿಕಲರು ಮತ್ತು ವೃದ್ಧರಿಗೆ ನೀಡಲಾಗುವುದು ಹಾಗೂ ಎರಡನೇ ಡೋಸ್ ಪಡೆದುಕೊಳ್ಳುವವರಿಗೆ ಆದ್ಯತೆಯನ್ನು ನೀಡಲಾಗುತ್ತದೆ ಎಂದವರು ಈ ಸಂದರ್ಭ ತಿಳಿಸಿದ್ದಾರೆ. ಪುಂಜಾಲಕಟ್ಟೆ ಪಿಎಚ್ ಸಿಯಲ್ಲಿ 300 ಕೋವಾಕ್ಸೀನ್ ಹೊರತುಪಡಿಸಿದರೆ ಉಳಿದೆಲ್ಲವೂ ಕೋವಿಶೀಲ್ಡ್ ಲಸಿಕೆ ಆಗಿರುತ್ತದೆ ಎಂದವರು ತಿಳಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ವಿನಂತಿಸಿದ್ದಾರೆ.