ಬಂಟ್ವಾಳ: ಆಕ್ಸಿಜನ್, ವೆಂಟಿಲೇಟರ್ ಮೊದಲಾದ ಸೌಕರ್ಯಗಳಿರುವ ಆಸ್ಪತ್ರೆ, ಲಸಿಕೆ ಹಾಕುವುದರಲ್ಲಿ ಪ್ರಗತಿ, ಆರೋಗ್ಯ ಜಾಗೃತಿ ಮೂಲಕ ಕೊರೊನಾ ಬಳಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಬಂಟ್ವಾಳ ಸದೃಢವಾಗಿ ನಿಂತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಮಂಗಳವಾರ ಕ್ಷೇತ್ರಕ್ಕೆ ಸಂಬಂಧಿಸಿದ ಆರೋಗ್ಯ ಸ್ವಯಂಸೇವಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ಕ್ಷೇತ್ರದ ಗ್ರಾಪಂಗಳಿಗೆ ಐಸಿಯು ಬಸ್ ತಲುಪಿದ್ದು, ಜನಸಾಮಾನ್ಯರ ಆರೋಗ್ಯರಕ್ಷಣೆಗೆ ನೆರವು ನೀಡಲಾಗಿದೆ. 60 ವರ್ಷಕ್ಕೆ ಮೇಲ್ಪಟ್ಟ ಶೇ.100 ಜನರಿಗೆ ಲಸಿಕೆ ನೀಡಲಾಗಿದೆ. ಕಾರ್ಯಕರ್ತರು ಪ್ರತಿ ಬೂತ್ ನಲ್ಲಿ ಇರುವ ಪ್ರತಿ ಮನೆಯವರ ಆರೋಗ್ಯದ ಮೇಲೆ ನಿಗಾ ಇಡಬೇಕು, ಜನಸೇವೆಗೆ ಬದ್ಧರಾಗಿರಬೇಕು ಎಂದವರು ಹೇಳಿದರು.
ಜಿಲ್ಲಾ ಆರೋಗ್ಯ ಸ್ವಯಂಸೇವಕರ ಅಭಿಯಾನ ಅಧ್ಯಕ್ಷ ಈಶ್ವರ್ ಕಟೀಲ್ ಮಾತನಾಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಉಪಸ್ಥಿತರಿದ್ದರು. ಡಾ.ಸುಕೇಶ್ ಕೊಟ್ಟಾರಿ ಮಾರ್ಗದರ್ಶನ ನೀಡಿದರು.ಆರೋಗ್ಯ ಸ್ವಯಂಸೇವಕರ ಅಭಿಯಾನದ ಕ್ಷೇತ್ರ ಪ್ರಮುಖ್ ಪ್ರಕಾಶ್ ಅಂಚನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹರ್ಷಿಣಿ ಪುಷ್ಪಾನಂದ ವಂದಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.