ಬಂಟ್ವಾಳ: ಕೆಎಸ್ಸಾರ್ಟಿಸಿ ಐಸಿಯು ಬಸ್, ಕೋವಿಡ್ ಲಸಿಕೆ ಹಾಗೂ ಕಾರ್ಮಿಕ ಇಲಾಖೆ ಯಿಂದ ಆಹಾರ ಕಿಟ್ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಂಗಳವಾರ ಬಿ.ಸಿ.ರೋಡ್ ಮಿನಿ ವಿಧಾನ ಸೌಧಕ್ಕೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಸುದರ್ಶನ ಜೈನ್ ಸಹಿತ ವಿವಿಧ ಕಾಂಗ್ರೆಸ್ ಮುಖಂಡರೊಂದಿಗೆ ತಹಸೀಲ್ದಾರ್ ಕೊಠಡಿಯೊಳಗೆ ತೆರಳಿದ ರೈ ವಿವಿಧ ವಿಚಾರಗಳ ಕುರಿತು ಪ್ರಸ್ತಾಪಿಸಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರನ್ನು ಆಗ್ರಹಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಮಿನಿ ವಿಧಾನಸೌಧದೊಳಗೆ ಹೆಚ್ಚಿನ ಜನರು ಪ್ರವೇಶಿಸದಂತೆ ಬಾಗಿಲು ಹಾಕಲಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದ ಘಟನೆಯೂ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈ, ರಾಜಧರ್ಮವನ್ನು ಉಲ್ಲೇಖಿಸುವ ಬಿಜೆಪಿ ಆಡಳಿತ ಇಂದು ಕ್ಷೇತ್ರದಲ್ಲಿ ತಾರತಮ್ಯ ಎಸಗುತ್ತಿದ್ದು, ಇದು ಮುಂದುವರಿದರೆ ಬಿಜೆಪಿ ಇದ್ದ ಪಂಚಾಯಿತಿ ಕಚೇರಿಯೆದುರು ಮಾತ್ರ ಹೋಗುವ ಕೆಎಸ್ಸಾರ್ಟಿಸಿ ಐಸಿಯು ಬಸ್ಸಿನೆದುರು ಮಲಗಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭೆ ಉಪಾಧ್ಯಕ್ಷೆ ಜೇಸಿಂತ ಡಿ’ಸೋಜ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ವಿ ಪೂಜಾರಿ ಮತ್ತು ಲವೀನಾ ವಿಲ್ಮಾ ಮೋರಸ್, ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಗಂಗಾಧರ್, ಲೋಲಾಕ್ಷ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಬಡಕಬೈಲ್, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಮುಹಮ್ಮದ್ ನಂದಾವರ, ಯೂಸುಫ್ ಕರಂದ್ಲಾಡಿ, ಪ್ರಶಾಂತ್ ಕುಲಾಲ್, ಸೀತಾರಾಮ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಚಂದ್ರಶೇಖರ ಪೂಜಾರಿ, ವೆಂಕಪ್ಪ ಪೂಜಾರಿ ಸಹಿತ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಬಂಟ್ವಾಳ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.