ಬಂಟ್ವಾಳ: ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮ ಶಾಲೆಗೆ ಹೊಸರೂಪ ತಂದು ಕೊಟ್ಟಿದೆ, ಸ್ಮರಣ ಸಂಚಿಕೆ ಮನ್ವಂತರ ಮುಂದಿನ ತಲೆಮಾರಿಗೂ ದಾರಿದೀಪವಾಗಲಿ ಎಂದು ಕಲ್ಲಡ್ಕ ಮಾದರಿ ಶಾಲೆಯ ಹಳೆ ವಿದ್ಯಾರ್ಥಿ, ಉದ್ಯಮಿ ಹಾಜಿ ಎನ್.ಸುಲೈಮಾನ್ ಹೇಳಿದರು.
ಕಲ್ಲಡ್ಕ ಮಾದರಿ ಹಿ.ಪ್ರಾ.ಶಾಲೆಯ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿಯ ಆಶ್ರಯದಲ್ಲಿ “ಮನ್ವಂತರ – ಶತರಜತ ಹೆಜ್ಜೆ” ಸ್ಮರಣ ಸಂಚಿಕೆಯನ್ನು ಬುಧವಾರ ಬೆಳಿಗ್ಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒಂದು ಊರಿನ ಶಾಲೆಯು ಒಳ್ಳೆಯ ರೀತಿಯಲ್ಲಿದ್ದರೆ, ಊರು ಒಳ್ಳೆಯದಾಗುತ್ತದೆ, ಅಂತಹಾ ಹಿರಿಮೆ ಪಡೆದಿರುವ ಕಲ್ಲಡ್ಕ ಮಾದರಿ ಶಾಲೆ ಸಾವಿರ ವರ್ಷಗಳ ಕಾಲ ಬೆಳಗಲಿ ಎಂದು ಹಾರೈಸಿದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿಮಾತನಾಡಿ, 1998ರಲ್ಲಿ ನಡೆದ ಶತಮಾನೋತ್ಸವ ಆಚರಣೆಯ ಸಂದರ್ಭವನ್ನು ನೆನಪಿಸಿಕೊಂಡರು. ಮಾಜಿಶಾಸಕ ರುಕ್ಮಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸೂಕ್ತ ನಾಯಕತ್ವ ಮಾತ್ರ ಯಾವುದೇ ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತದೆ, ಕಲ್ಲಡ್ಕ ಮಾದರಿ ಶಾಲೆಯ ವ್ಯವಸ್ಥೆ, ಶತಮಾನೋತ್ತರ ಬೆಳ್ಳಿ ಹಬ್ಬದ ಯಶಸ್ಸಿಗೂ ಸರ್ವರ ಸಹಕಾರ ಹಾಗೂ ಪಾಲ್ಗೊಳ್ಳುವಿಕೆ ಯ ಜೊತೆಗೆ ಸೂಕ್ತ ನಾಯಕತ್ವ ಕಾರಣ ಎಂದರು. ಕೇಂದ್ರ ಸರ್ಕಾರದ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಕು.ದಿಯಾಶ್ರೀ ಯನ್ನು ಉದ್ಯಮಿ ಜಿತೇಂದ್ರ ಎಸ್.ಕೊಟ್ಟಾರಿ ಗೌರವಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಡಾ ಸುರೇಶ್ , ಹಿರಿಯ ವಿದ್ಯಾರ್ಥಿನಿ,ಶಿಕ್ಷಕಿ ಶಶಿಕಲಾ ಮಾತನಾಡಿದರು. ಗೋಳ್ತಮಜಲು ಗ್ರಾ.ಪಂ. ಅಭಿಷೇಕ್ ಶೆಟ್ಟಿ , ಶಾರದಾ ಸೇವಾಪ್ರತಿಷ್ಠಾನದ ಅಧ್ಯಕ್ಷರಾದ ನರಸಿಂಹ ಮಡಿವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ನಾಗೇಶ್ ಸ್ವಾಗತಿಸಿದರು. ಶಾಲಾಮುಖ್ಯಶಿಕ್ಷಕ ಅಬೂಬಕರ್ ಅಶ್ರಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಶತಮಾನೋತ್ತರ ಬೆಳ್ಳಿ ಹಬ್ಬದ ಈ ಸಂದರ್ಭ ಶಾಲೆಯ ಮಕ್ಕಳ ಸಂಖ್ಯೆ 465 ಕ್ಕೆ ಏರಿಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಯತೀನ್ ಕುಮಾರ್ ವಂದಿಸಿದರು.