ಬಂಟ್ವಾಳ: ರೈತಮೋರ್ಚಾ ಸಭೆಯನ್ನು ರೈತರ ಮನೆಗಳಲ್ಲೇ ಮಾಡಿ, ಕೃಷಿಕರನ್ನು ಆರ್ಥಿಕವಾಗಿಯೂ ಸದೃಢರನ್ನಾಗಿ ಮಾಡುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಲಹೆ ನೀಡಿದ್ದಾರೆ,
ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಬಂಟ್ವಾಳ ಬಿಜೆಪಿ ರೈತ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದರು. ದೇಶದ ೬೦-೭೦ ಶೇ. ಮಂದಿ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ಕೃಷಿ ಬೆಳೆದಾಗ ಮಾತ್ರ ದೇಶ ಬೆಳೆಯಲು ಸಾಧ್ಯ. ಮಾರುಕಟ್ಟೆ, ಯಾಂತ್ರೀಕರಣ ಕೃಷಿಯ ಮೂಲಕ ರೈತರ ಲಾಭಕ್ಕಾಗಿ ಕಾಯ್ದೆಗಳು ಬದಲಾಗಿವೆ. ಈ ವಿಚಾರವನ್ನು ರೈತ ಮೋರ್ಚಾ ಸದಸ್ಯರು ಪ್ರತಿ ರೈತರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಕಾರ್ಯಕ್ರಮ ಉದ್ಘಾಟಿಸಿದರು. ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಅಣ್ಣಳಿಕೆ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಉಪಾಧ್ಯಕ್ಷ ಚಿದಾನಂದ, ಪಕ್ಷದ ಮುಂದಾಳು ಮಾಧವ ಮಾವೆ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಮಜಲು, ಬಂಟ್ವಾಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಸಜೀಪ ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ರೈತ ಮೋರ್ಚಾ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಸ್ವಾಗತಿಸಿದರು. ಪ್ರಣಾಮ್ ಅಜ್ಜಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.