ಬಂಟ್ವಾಳ: ಸಂಘರ್ಷರಹಿತವಾಗಿ ಸಾಮಾಜಿಕ ಪರಿವರ್ತನೆಯ ಕ್ರಾಂತಿ ಮಾಡಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಜನ್ಮದಿನಾಚರಣೆಗೆ ಅರ್ಥ ಬರಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಬಂಟ್ವಾಳ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಅವರ 167ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸಮಾಜದ ಎಲ್ಲಾ ಧರ್ಮ, ವರ್ಗದ ಜನರನ್ನು ತನ್ನವರಂತೆ ಕಂಡ ಸಂತ ನಾರಾಯಣ ಗುರು ಅವರ ಆದರ್ಶಗಳನ್ನು ಪಾಲಿಸುವುದು ಈ ಕಾಲಘಟ್ಟದ ಅತ್ಯಗತ್ಯವಾಗಿದೆ ಎಂದವರು ಹೇಳಿದರು.
ಬಿಲ್ಲವ ಸಮಾಜದ ಮುಖಂಡ, ಬಂಟ್ವಾಳ ಕ್ರೆಡಿಟ್ ಕೋಅಪರೇಟಿವ್ ಬ್ಯಾಂಕ್ ಸಿಇಒ ಬೇಬಿ ಕುಂದರ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು ಜಗತ್ತಿಗೆ ನೀಡಿದ ಸಂದೇಶ ಅಮೂಲ್ಯವಾದದ್ದು ಎಂದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಸಿಡಿಪಿಒಗಳಾದ ಗಾಯತ್ರಿ ಕಂಬಳಿ, ಉಷಾ, ಉಪತಹಸೀಲ್ದಾರ್ ಗಳಾದ ಅಣ್ಣು ನಾಯ್ಕ್, ಮತ್ತು ರಾಜೇಶ್ ನಾಯ್ಕ್ , ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳ್ಯ, ನವೀನ್ ಬೆಂಜನಪದವು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.