ಕೊರೊನಾ ಕೇರ್ ಸೆಂಟರ್ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಲು ಸೂಚನೆ
ಬಂಟ್ವಾಳ: ಕೊರೊನಾ ಸೋಂಕು ಪ್ರಕರಣಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಅಧಿಕಾರಿಗಳು ಆದೇಶಗಳನ್ನಷ್ಟೇ ಮಾಡಿದರೆ ಸಾಲದು, ಅವುಗಳನ್ನು ನಿಯಂತ್ರಿಸುವ ಕೆಲಸವನ್ನು ಸ್ವತಃ ನಿಗಾ ಇರಿಸಬೇಕು, ಕೋವಿಡ್ ಕೇರ್ ಸೆಂಟರ್ ಗಳ ಮೇಲೆ ಜನರಿಗೆ ವಿಶ್ವಾಸ ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯಿತಿ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣದ ಕುರಿತ ಸಭೆ ಮಂಗಳವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ನಾವು ಆದೇಶ ಮಾಡಿದ ಮೇಲೆ ಅನುಷ್ಠಾನ ಮಾಡದಿದ್ದರೆ ಕಂಟ್ರೋಲ್ ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಕೊರೊನಾ ನಿಯಂತ್ರಣ ವಿಚಾರದಲ್ಲಿ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು, ಕೋವಿಡ್ ಕೇರ್ ಸೆಂಟರ್ ಮೇಲೆ ಜನರಿಗೆ ವಿಶ್ವಾಸ ಮೂಡುವ ರೀತಿಯಲ್ಲಿ ಕೆಲಸ ಮಾಡಬೇಕು, ನಾವು ಸ್ಥಳಕ್ಕೆ ಹೋಗಿ ಪರಿಶೀಲಿಸದೆ ಯಾರ್ಯಾರ ಮಾತು ಕೇಳಿ ಚೆನ್ನಾಗಿದೆ ಎಂದು ನಂಬಬಾರದು ಎಂದರು. ಯಾವುದೇ ಹಂತದಲ್ಲೂ ಸಿಬ್ಬಂದಿ ಕೊರತೆ ಸಮಸ್ಯೆ ಬರಬಾರದು, ಏನಾದರೂ ಹೆಚ್ಚುಕಮ್ಮಿಯಾದರೆ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದ ಸಚಿವರು, ಪ್ರಕರಣಗಳು ಜಾಸ್ತಿಯಾದಾಗದಂತೆ ನಿಗಾ ಇರಿಸಬೇಕು ಎಂದರು.
ಬಂಟ್ವಾಳದಲ್ಲಿ 277 ಸಕ್ರಿಯ ಪ್ರಕರಣ: ಬಂಟ್ಚಾಳ ಕ್ಷೇತ್ರದಲ್ಲಿ ಒಟ್ಟು 277 ಸಕ್ರಿಯ ಪ್ರಕರಣಗಳಿದ್ದು, 235 ಹೋಂ ಐಸೋಲೇಶನ್ ನಲ್ಲಿದ್ದಾರೆ. 42 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಏಪ್ರಿಲ್ 1ರಿಂದೀಚೆಗೆ 82 ಮೃತಪಟ್ಟಿದ್ದಾರೆ. ಕಳೆದ ಏಳು ದಿನಗಳಲ್ಲಿ ಪಾಸಿಟಿವಿಟಿ ರೇಟ್ 1.77 ಇದೆ, ಕಳೆದ ವಾರ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದರು.
ಎರಡನೇ ಡೋಸ್ ಗೆ ಬಾಕಿ ಇರುವವರ ಸಂಖ್ಯೆ ಕುರಿತು ನಿಗಾ ವಹಿಸಲು ಸೂಚಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಮಾಣಿ, ಮಂಚಿ, ಕಲ್ಲಡ್ಕ, ಬಾಳ್ತಿಲ, ಪುಂಜಾಲಕಟ್ಟೆ, ದೈವಸ್ಥಳ ಸಹಿತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಗಾ ಇರಿಸುವಂತೆ ತಿಳಿಸಿದರು.
ಮಕ್ಕಳ ಜನಸಂಖ್ಯೆಯ ಕುರಿತು ತಮ್ಮ ವ್ಯಾಪ್ಯಿಯ ಗಣತಿ ಮಾಡಿಕೊಂಡು, ಒಂದರಿಂದ 18 ವರ್ಷದೊಳಗಿನ ಪ್ರತಿಯೊಂದು ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು ಇದಕ್ಕೆ ಸ್ಥಳೀಯ ಮಕ್ಕಳ ತಜ್ಞರ ಸಹಾಯ ಪಡೆದುಕೊಳ್ಳಿ ಎಂದು ಸೂಚಿಸಿದ ಜಿಲ್ಲಾಧಿಕಾರಿ, ವಿಶೇಷ ಮಕ್ಕಳಿಗೆ ಪ್ರಥಮ ಆದ್ಯತೆ ನೀಡಲು ತಿಳಿಸಿದರು.
ಇದೇ ವೇಳೆ ಕ್ಷೇತ್ರದಾದ್ಯಂತ ಸಂಚರಿಸುತ್ತಿರುವ ಕೆಎಸ್ಸಾರ್ಟಿಸಿ ಐಸಿಯು ಬಸ್ ಗಳಲ್ಲಿ ಈಗಾಗಲೇ ಬೇಡಿಕೆ ಮೇರೆಗೆ ಇಸಿಜಿ ಯಂತ್ರ ಒದಗಿಸಲಾಗಿದ್ದು, ಮಕ್ಕಳ ತಜ್ಞರನ್ನೂ ಸೇರಿಸುವಂತೆ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಪ್ರತಿಯೊಂದು ಜೀವವೂ ಮುಖ್ಯ. ಹೋಂ ಐಸೋಲೇಶನ್ ನಲ್ಲಿರುವವರು ಮೃತಪಟ್ಟರೆ ಮೆಡಿಕಲ್ ಆಫೀಸರ್ ಹೊಣೆಗಾರರಾಗುತ್ತಾನೆ ಈ ಹಿನ್ನೆಲೆಯಲ್ಲಿ ಆದಷ್ಟು ಕೋವಿಡ್ ಕೇರ್ ಸೆಂಟರ್ ಗೆ ತೆರಳುವಂತೆ ವ್ಯವಸ್ಥೆ ಕಲ್ಪಿಸಿ ಜನರಿಗೆ ಕೋವಿಡ್ ಕೇರ್ ಸೆಂಟರ್ ಕುರಿತ ಭಯವನ್ನು ತೊಡೆದು ಹಾಕಿ, ತಹಸೀಲ್ದಾರ್ ಮತ್ತು ಇಒ ಮುಂದಾಳತ್ವದಲ್ಲಿ ಪಿಡಿಒ, ವಿಎ, ಪೊಲೀಸ್, ಚೀಫ್ ಆಫೀಸರ್ ಗಳು ಈ ಕುರಿತು ಮುತುವರ್ಜಿ ವಹಿಸಿ, ಹೋಂ ಐಸೋಲೇಶನ್ ನಿಯಮ ಉಲ್ಲಂಘಿಸಿದರೆ ಕೇಸ್ ಮಾಡಿ ಎಂದರು. ಕೋವಿಡ್ ಕೇರ್ ಸೆಂಟರ್ ಸುಸಜ್ಜಿತಗೊಳಿಸಲು ಸೂಚಿಸಿದ ಜಿಲ್ಲಾಧಿಕಾರಿ, ಈ ಕುರಿತು ವಿಎ ಮತ್ತು ಪಿಡಿಒಗಳು ಕೆಲಸ ಮಾಡಬೇಕು, ಪ್ರೈಮರಿ ಕಾಂಟ್ಯಾಕ್ಟ್ ನಿಯಂತ್ರಿಸುವುದು ಮುಖ್ಯ, ಆಶಾ ಕಾರ್ಯಕರ್ತೆಯರ ಸಹಿತ ಸಿಬ್ಬಂದಿ ಕೊರತೆಯಾದಲ್ಲಿ ಭರ್ತಿ ಮಾಡಿಕೊಳ್ಳಿ ಎಂದರು.
ಕೊರೊನಾ ಹೆಚ್ಚಳವಾಗದಂತೆ ಗಡಿಗಳನ್ನು ಮತ್ತಷ್ಟು ನಿಯಂತ್ರಣದಲ್ಲಿರಿಸಬೇಕು, ಕಾಲುದಾರಿಗಳ ಮೇಲೆ ನಿಗಾ ಇರಿಸಬೇಕು ಎಂದು ಡಿವೈಎಸ್ಪಿ ವೆಲಂಟೈನ್ ಡಿಸೋಜ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಸಹಾಯಕ ಕಮೀಷನರ್ ಮದನ್ ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಬುಡ ಅಧ್ಯಕ್ಷ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಡಿವೈಎಸ್ಪಿ ವೆಲಂಟೈನ್ ಡಿಸೋಜ, ಬಿಇಒ ಜ್ಞಾನೇಶ್, ಸಿಡಿಪಿಒ ಗಾಯತ್ರಿ ಕಂಬಳಿ ಸಹಿತ ವಿವಿಧ ವೈದ್ಯಾಧಿಕಾರಿಗಳು, ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಇಒ ರಾಜಣ್ಣ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ದಿನೇಶ್ ವಂದಿಸಿದರು.