ಬಸ್ಸಿನಲ್ಲಿ ಇಸಿಜಿ ತಪಾಸಣೆಗೆ ವ್ಯವಸ್ಥೆ – ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ
ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಪ್ರಯತ್ನದ ಮೂಲಕ ಬಂಟ್ವಾಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಸಾರಿಗೆ ಸುರಕ್ಷಾ ಐಸಿಯು ಬಸ್ಸು ಈ ತನಕ ಬಂಟ್ವಾಳದ 21 ಗ್ರಾ.ಪಂ.ಗಳನ್ನು ತಲುಪಿದ್ದು, ಒಟ್ಟು 1303 ಮಂದಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಸೋಮವಾರ ಬಂಟ್ವಾಳ ಕ್ಷೇತ್ರದ ಸರಪಾಡಿ ಪಂಚಾಯಿತಿಗೆ ಬಸ್ ತಲುಪಿದ್ದು, ಈ ಸಂದರ್ಭ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜನರು ದೂರದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಲು ಸಾಧ್ಯವಿಲ್ಲದ ವೇಳೆ ಬಸ್ ಉಪಯೋಗಕ್ಕೆ ದೊರಕುತ್ತಿದ್ದು, ಜನರ ಬೇಡಿಕೆಯಂತೆ ಇಸಿಜಿ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಲಾಗುವುದು. ಈಗಾಗಲೇ ಬಸ್ ನಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಕಾರ್ಯಾಚರಿಸುತ್ತಿದ್ದು, ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಪೂರ್ಣ ಪ್ರಮಾಣದ ಆಸ್ಪತ್ರೆ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದರು.