ಬಂಟ್ವಾಳ: ಸ್ವಾತಂತ್ರ್ಯದ ಮಹತ್ವದ ಅರಿವು ಮೂಡಿಸುವ ಕಾರ್ಯ ಇಂದು ಅಗತ್ಯ, ಸ್ವಾತಂತ್ರ್ಯವನ್ನು ಕಳಕೊಂಡ ಕಾರಣವನ್ನೂ ತಿಳಿಸಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ಎಸ್ಎಲ್ಸಿ ಪರೀಕ್ಷಯಲ್ಲಿ ಪೂರ್ಣ ಅಂಕಗಳನ್ನು ಪಡೆದ ಎನ್. ಪ್ರತಿಕ್ ಮಲ್ಯ ಅವರನ್ನು ಅಭಿನಂದಿಸಿದ ಅವರು, ಇದೇ ಮೊದಲ ಬಾರಿ 24 ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ , ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಎಲ್ಲಾ ಎಸ್ ಡಿಎಂ ಸಿಗಳು ಕ್ರಿಯಾಶೀಲತೆಯಿಂದ ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದ ತಹಸೀಲ್ದಾರ್ ರಶ್ಮೀ ಎಸ್ ಆರ್, ಕೊರೊನಾ ಇಂದು ಜಗತ್ತಿನಾದ್ಯಂತ ಆವರಿಸಿಕೊಂಡಿದ್ದು, ಅದರ ಹಿಡಿತದಿಂದ ಸ್ವತಂತ್ರರಾಗಲು ನಾವು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ ಎಂದರು. ಬಂಟ್ವಾಳ ಡಿವೈಎಸ್ಪಿ ವೆಲೈಂಟೈನ್ ಡಿಸೋಜಾ, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ. ಚೆನ್ನಕೇಶವ ಮೂರ್ತಿ ವೇದಿಕೆಯಲ್ಲಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ವಂದಿಸಿದರು. ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ಪೋಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಗೃಹರಕ್ಷಕದಳ ರಾಷ್ಟ್ರಧ್ವಜಾರೋಹಣ ಸಂದರ್ಭ ಉಪಸ್ಥಿತರಿದ್ದರು. ಮಿನಿವಿಧಾನಸೌಧದಲ್ಲಿ ಕರ್ತವ್ಯ ಸಲ್ಲಿಸುವ ವಿವಿಧ ಇಲಾಖೆಗಳ ಸಿಬ್ಬಂದಿ ವಿಶೇಷ ಸಾಂಪ್ರದಾಯಿಕ ಉಡುಪಿನೊಂದಿಗೆ ಗಮನ ಸೆಳೆದರು. ಸಮಾರಂಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.