ಬಂಟ್ವಾಳ: ಜನಪ್ರಿಯರಾಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕಾರ್ಯವೈಖರಿಯಿಂದ ಹತಾಶರಾಗಿ ಮಾಜಿ ಸಚಿವ ರಮಾನಾಥ ರೈ ಆರೋಪಗಳನ್ನು ಮಾಡುತ್ತಿದ್ದು, ಇದು ಅದರಿಗೆ ಶೋಭೆ ತರುವುದಿಲ್ಲ. ಮಾಜಿ ಸಚಿವರ ಯಾವುದೇ ಆರೋಪಗಳನ್ನು ಕ್ಷೇತ್ರದ ಜನತೆ ನಂಬುವ ಸ್ಥಿತಿಯಲ್ಲಿಲ್ಲ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಹೇಳಿದ್ದಾರೆ.
ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೆ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿಲ್ಲಿಸುವ ಕೆಲಸ ಮಾಡಲಿ ಎಂದರು. ಆಧಾರ್ ಲಿಂಕ್ ವ್ಯವಸ್ಥೆಯಿಂದ ವಾರ್ಷಿಕ ಆದಾಯ 1.2 ಲಕ್ಷ ರೂ.ದಾಟಿದರೆ ತಾನಾಗಿಯೇ ಬಿಪಿಎಲ್ ಪಡಿತರ ರದ್ದಾಗುತ್ತಿದ್ದು, ಅದಕ್ಕೆ ಶಾಸಕರು, ಸರಕಾರ ಕಾರಣವಲ್ಲ. ಈ ವಿಚಾರ ಅವರಿಗೂ ಗೊತ್ತಿದ್ದರೂ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ರಾಜಧರ್ಮ ಕುರಿತು ಮಾತನಾಡುವ ಅವರು ಓಡಾಡುತ್ತಿರುವ ಕಾರು ಯಾರದ್ದು ಎಂದು ಪ್ರಶ್ನಿಸಿದರು. ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ರೊನಾಲ್ಡ್ ಡಿಸೋಜಾ, ವಜ್ರನಾಥ ಕಲ್ಲಡ್ಕ, ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ ಉಪಸ್ಥಿತರಿದ್ದರು.