ಬಂಟ್ವಾಳ: ಬಿಪಿಎಲ್ ಕಾರ್ಡ್ ರದ್ದು ಮಾಡುವುದು, ಆಡಳಿತ ಪಕ್ಷದ ಸದಸ್ಯರೇ ಕೊಡುವಂತೆ ಹೇಳಿಕೆ ನೀಡುವುದು ಮತ್ತೆ ಕೊಡಿಸುವುದಾಗಿ ಹೇಳುವುದು ಪ್ರಚಾರ ಗಿಟ್ಟಿಸುವುದಕ್ಕಾ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.
ಮಂಗಳವಾರ ಬಂಟ್ವಾಳದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಧರ್ಮ ಕುರಿತು ಕೇವಲ ಭಾಷಣ ಮಾಡಿದರೆ ಸಾಲದು ಅನುಷ್ಠಾನಕ್ಕೆ ತರಬೇಕು. ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರತಿಭಟನೆ ನಡೆಯುತ್ತಿದೆ, ಅವರಿಗೆ ಪರಿಹಾರ ನೀಡುವುದು ಸಜೀವವಾಗಿರುವ ಸರ್ಕಾರದ ಜವಾಬ್ದಾರಿ ಎಂದರು. ತಾನು ಕೇವಲ ಕೃಷಿ ಮಾಡುತ್ತಿದ್ದೇನೆ. ಕೆಲವರು ಭರವಸೆ ಕೊಟ್ಟದ್ದನ್ನು ಪತ್ರಿಕಾಗೋಷ್ಟಿ ಮಾಡ್ತಾರೆ, ನಾನು ಆದೇಶ ಪತ್ರ ತೋರಿಸಿ ಪತ್ರಿಕಾಗೋಷ್ಠಿ ಮಾಡುವವನು ಎಂದರು. ಈಗ ನಡೆಯುತ್ತಿರುವ ಅಧಿಕಾರಿಗಳ ವರ್ಗಾವಣೆ ಹಾಗೂ ತನ್ನ ಹತ್ತು ವರ್ಷಗಳ ಅವಧಿಯಲ್ಲಾದ ವರ್ಗಾವಣೆಯನ್ನು ಹೋಲಿಸಿ ಯಾವುದು ಜಾಸ್ತಿ ಎಂದು ಸವಾಲೆಸೆದರು. ನಾವು ಈ ಕ್ಷೇತ್ರದಲ್ಲಿ ಜಾತಿ, ಧರ್ಮ, ಭಾಷೆ ನೋಡದೆ ಮಾಡಿದ್ದೇವೆ. ಅದು ರಾಜಧರ್ಮ. ಯಾರೂ ನನ್ನನ್ನು ಮತೀಯವಾದಿ ಎನ್ನುವುದಿಲ್ಲ ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿಯ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವೀನಾ ವಿಲ್ಮಾ ಮೋರಾಸ್, ತಾಪಂ ಮಾಜಿ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ, ಧನಲಕ್ಷ್ಮೀ ಸಿ ಬಂಗೇರ,ಪುರಸಭಾ ಸದಸ್ಯರಾದ ಜನಾರ್ಧನ್ ಚಂಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.