ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾದರೂ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಗುರುವಾರ 2.9 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನದಿ ಶುಕ್ರವಾರ ಸಂಜೆ ವೇಳೆ 7 ಮೀಟರ್ ಎತ್ತರಕ್ಕೆ ತಲುಪಿತ್ತು. ರಾತ್ರಿ ವೇಳೆ ಮತ್ತೆ ಇಳಿಕೆ ಕಂಡು 6.9 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ನದಿ ನೀರಿನ ಹರಿವು ಜಾಸ್ತಿಯಾಗುತ್ತಿದೆ ಎನ್ನಲಾಗಿದೆ. ಸಂಭ್ಯಾವ್ಯ ಅಪಾಯಗಳನ್ನು ಎದುರಿಸಲು ಗೃಹರಕ್ಷಕದಳದ ತುರ್ತು ಕಾರ್ಯಪಡೆ ಸಹಿತ ತಾಲೂಕಾಡಳಿತ ಸಜ್ಜಾಗಿದೆ.
ಅಲ್ಲಲ್ಲಿ ಹಾನಿ: ಮಳೆಯ ಜೊತೆ ಗಾಳಿ ಇದ್ದ ಕಾರಣ ತಾಲೂಕಿನ ಹಲವೆಡೆ ಹಾನಿ ಸಂಭವಿಸಿದೆ. ಕುಳ ಗ್ರಾಮದ ಮೋನಪ್ಪ ಗೌಡ ಅವರ ವಾಸದ ಮನೆಗೆ ಹಾನಿಯಾಗಿದೆ. ಪುಣಚ ಗ್ರಾಮದ ಗರಡಿ ಎಂಬಲ್ಲಿ ಇನಾಸ್ ಡಿಸೋಜ ಮನೆಯ ತಡೆಗೋಡೆಯ ಕೆಳಭಾಗದಲ್ಲಿ ಮಣ್ಣು ಕುಸಿದಿದೆ. ನೆಟ್ಲಮುಡ್ನೂರು ಗ್ರಾಮದ ಏಮಾಜೆ ಮನೆ ಎಂಬಲ್ಲಿ ಬಾಬು ನಲ್ಕೆ ಮನೆಯ ಬಚ್ಚಲು ಹಾಗೂ ಶೌಚಾಲಯದ ಕಟ್ಟಡಕ್ಕೆ ಹಾನಿಯಾಗಿದೆ. ಶಂಭೂರು ಗ್ರಾಮದ ಕೆದುಕೋಡಿ ಎಂಬಲ್ಲಿ ರಮೇಶ್ ಎಂಬವರ ಮನೆ ಬಿರುಕುಬಿಟ್ಟಿದೆ. ಅದೇ ಗ್ರಾಮದ ಬಾಬು ಸಪಲ್ಯರ ಅಡಕೆ ತೋಟಕ್ಕೆ ಹಾನಿಯಾಗಿದೆ. ಪಾಣೆಮಂಗಳೂರು ಬಂಗ್ಲೆಗುಡ್ಡೆಯ ಶಾರದಾ ಹೈಸ್ಕೂಲು ಕಂಪೌಂಡ್ ಬಿದ್ದಿದೆ.