ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಕಂದೂರು ಎಂಬಲ್ಲಿ ಗಾಂಜಾ ಸಾಗಾಟ ಪ್ರಕರಣವೊಂದನ್ನು ಬಂಟ್ವಾಳ ನಗರ ಪೊಲೀಸರು ಪತ್ತೆಹಚ್ಚಿದ್ದು, ಈ ಪೈಕಿ ಇಲಿಯಾಸ್ ಎಂಬಾತನನ್ನು ಬಂಧಿಸಿದ್ದಾರೆ. ಮುಡಿಪು ಕಡೆಯಿಂದ ಮೆಲ್ಕಾರ್ ಕಡೆಗೆ ವ್ಯಕ್ತಿಯೋರ್ವರು ಬೈಕ್ ಒಂದರಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದ ಮೇರೆಗೆ ಎಸ್.ಐ. ಅವಿನಾಶ್, ಸಿಬ್ಬಂದಿಗಳ ಜೊತೆಯಲ್ಲಿ ಸಜಿಪಮುನ್ನೂರು ಗ್ರಾಮದ, ಕಂದೂರು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ಮುಡಿಪು ಕಡೆಯಿಂದ ಬೈಕ್ ನಲ್ಲಿ ಬಂದ ಇಲಿಯಾಸ್ (36) ನನ್ನು ತಡೆದು ವಿಚಾರಿಸಿದಾಗ ಗಾಂಜಾವನ್ನು ವಶದಲ್ಲಿ ಇಟ್ಟುಕೊಂಡಿರುವುದು ಕಂಡುಬಂದಿದ್ದು, ಈತನಿಂದ 30 ಸಾವಿರ ರೂ ಮೌಲ್ಯದ 1430 ಗ್ರಾಂ ತೂಕದ ಗಾಂಜಾ 10 ಪ್ಯಾಕ್ ಒ.ಸಿ.ಬಿ. ಸ್ಲಿಮ್ ಪ್ರೀಮಿಯಮ್ ಎಂದು ಅಂಗ್ಲ ಭಾಷೆಯಲ್ಲಿ ಬರೆದ ಚಿಕ್ಕ ಪ್ಯಾಕೆಟ್ ಗಳು ಇದ್ದು, ಅವುಗಳ ಬಗ್ಗೆ ವಿಚಾರಿಸಲಾಗಿ, ಗಾಂಜಾ ಸೇವನೆಗೆ ಬಳಸುವ ಸ್ಟ್ರಿಪ್ ಆಗಿರುತ್ತದೆ. ಗಾಂಜಾ ಸಾಗಾಟಕ್ಕೆ ಬಳಸಿದ ಆಕ್ಟಿವಾ ಹಾಗೂ ಸೇವನೆಗೆ ಬಳಸುವ ಸ್ಟ್ರಿಪ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹೃಷಿಕೇಷ್ ಭಗವಾನ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಭಾಸ್ಕರ ಒಕ್ಕಲಿಗ ನಿರ್ದೇಶನದಂತೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ವೆಲೈಂಟೈನ್ ಡಿಸೋಜಾ ಆದೇಶದಂತೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಣಕರಾದ ಚೆಲುವರಾಜು, ಉಪನಿರೀಕ್ಷಕರಾದ ಅವಿನಾಶ್, ಎ.ಎಸ್.ಐ ಗಿರೀಶ್ ಮತ್ತು ಬಂಟ್ವಾಳ ಡಿ.ವೈ.ಎಸ್.ಪಿ ವಿಶೇಷ ತಂಡದ ಸಿಬ್ಬಂದಿ ಉದಯ ರೈ, ಪ್ರವೀಣ್ ಎಂ, ಪ್ರಶಾಂತ್, ಇರ್ಷಾದ್ ಪಿ, ಗೋಣಿಬಸಪ್ಪ, ಕುಮಾರ್ ಎಚ್.ಕೆ ಮತ್ತು ವಿವೇಕ್, ರಾಘವೇಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಈ ಕಾರ್ಯಾಚರಣೆಗೆ ಅಧೀಕ್ಷಕರು ಪ್ರಶಂಸಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.